fbpx
ಸಮಾಚಾರ

ನೆಹರೂ ಕುಟುಂಬದ ಬಗ್ಗೆ ವಿವಾದಿತ ಹೇಳಿಕೆ ನೀಡಿದ ‘ಬಿಗ್​​​ ಬಾಸ್‘​​ ಸ್ಪರ್ಧಿ ಅರೆಸ್ಟ್!

ಹಿಂದಿ ಚಿತ್ರರಂಗದ ನಟಿ, ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿದ್ದ ಪಾಯಲ್ ರೋಹ್ಟಗಿ ಅವರನ್ನು ಭಾನುವಾರದಂದು ರಾಜಸ್ಥಾನದ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಪಾಯಲ್​ ಅವರು ಈ ಬಗ್ಗೆ ಟ್ವೀಟ್ ಮಾಡಿ ತಮ್ಮನ್ನು ಬಂಧಿಸಲಾಗಿದೆ ಎಂದಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಬಗ್ಗೆ ಅವಹೇಳನಕಾರಿ ವಿಡಿಯೋ ಪೋಸ್ಟ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನ ಪೊಲೀಸರು ಪಾಯಲ್ ರೊಹ್ಟಗಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

 

 

ಪಾಯಲ್‌ ವಿರುದ್ಧ ಐಟಿ ಕಾಯ್ದೆ ವಿಧಿ 67 (ವಿದ್ಯುನ್ಮಾನ ಮಾಧ್ಯಮದಲ್ಲಿ ಆಕ್ಷೇಪಾರ್ಹ ಮಾಹಿತಿ ಪ್ರಕಟಣೆ), ವಿಧಿ 504 (ಅಪಮಾನಿಸುವ ಮತ್ತು ಶಾಂತಿಗೆ ಭಂಗ ಉಂಟು ಮಾಡುವ ಉದ್ದೇಶ) ಮತ್ತು ಐಪಿಸಿ ವಿಧಿ 505 (ವದಂತಿಗಳ ಪ್ರಚಾರ) ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ. ಇಂಟರ್‌ನೆಟ್‌ನಲ್ಲಿ ವ್ಯಾಪಕವಾಗಿ ಹರಿದಾಡಿದ್ದ ವಿಡಿಯೊದಲ್ಲಿ ಪಾಯಲ್‌ ಅವರು, ‘ಮೋತಿಲಾಲ್‌ ನೆಹರೂ ಅವರು ಜವಹರಲಾಲ್‌ ನೆಹರೂ ಅವರ ನಿಜವಾದ ತಂದೆಯಲ್ಲ’ ಎಂದು ಹೇಳಿದ್ದರು ಎಂದು ಆರೋಪಿಸಲಾಗಿದೆ.

ಅಂದಹಾಗೆ ಕಾಂಗ್ರೆಸ್ ವಿರುದ್ಧ ಪೋಸ್ಟ್ ಮಾಡುವ ಪಾಯಲ್, ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಪೊಲೀಸರು ಪಾಯಲ್ ಅವರಿಗೆ ಐದು ಬಾರಿ ನೋಟಿಸ್ ನೀಡಿದ್ದು, ಉತ್ತರಿಸದ್ದಕ್ಕೆ ಬಂಧಿಸಿದ್ದಾರೆ ಎನ್ನಲಾಗಿದೆ.

ಬಂಧನದ ಬಳಿಕ ಟ್ವೀಟ್ ಮಾಡಿರುವ ಪಾಯಲ್, ನಾನು ಮೋತಿಲಾಲ್​ ನೆಹರೂ ವಿರುದ್ಧ ಮಾತನಾಡಿ ವಿಡಿಯೋ ಮಾಡಿದ್ದಕ್ಕೆ ನನ್ನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಆದರೆ ವಿಡಿಯೋದ ಎಲ್ಲಾ ಮಾಹಿತಿಗಳನ್ನು ಗೂಗಲ್​ನಿಂದಲೇ ಪಡೆದಿದ್ದು, ಹಾಗಾದರೆ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಸುಮ್ಮನೆ ತಮಾಷೆಗಾಗಿ ಇದೆಯೇ ಎಂದು ಪ್ರಧಾನಮಂತ್ರಿ ಸಚಿವಾಲಯ, ಗೃಹಸಚಿವಾಲಯವನ್ನು ಟ್ಯಾಗ್​ ಮಾಡಿ ಪ್ರಶ್ನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top