fbpx
ಸಮಾಚಾರ

“ಸಂಸ್ಕೃತ ಮಾತನಾಡಿದರೇ ಮಧುಮೇಹ ಮತ್ತು ಬೊಜ್ಜು ನಿವಾರಣೆ ಆಗುತ್ತದೆ” ಟೀಕೆಗೊಳಗಾದ ಸಂಸದನ ಹೇಳಿಕೆ!

ನೀವು ಸಕ್ಕರ ಕಾಯಿಲೆ ಬರದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಬೊಜ್ಜಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯಾ? ಇದನ್ನೆಲ್ಲ ತಡೆಯಲು ನೀವು ನಿತ್ಯ ಸಂಸ್ಕೃತ ಮಾತನಾಡಿ. ಆಗ ಈ ಕಾಯಿಲೆಗಳು ಕಾಣಿಸಿಕೊಳ್ಳುವುದೇ ಇಲ್ಲ, ಬಿಜೆಪಿ ಸಂಸದ ಗಣೇಶ್​ ಸಿಂಗ್ ಹೀಗೆ ಹೇಳಿ ​ ಟೀಕೆಗೆ ಒಳಗಾಗಿದ್ದಾರೆ.

ಗುರುವಾರ ಸದನದಲ್ಲಿ ಸಂಸ್ಕೃತಕ್ಕೆ ಸಂಬಂಧಿಸಿದ ಸಂವಾದದಲ್ಲಿ ಮಾತನಾಡುವ ವೇಳೆ ಬಿಜೆಪಿ ಸಂಸದ ಗಣೇಶ್ ಸಿಂಗ್ ಅವರು ಈ ಹೇಳಿಕೆ ಕೊಟ್ಟಿದ್ದಾರೆ. ಅಮೆರಿಕ ಮೂಲದ ಸಂಸ್ಥೆಯೊಂದು ಈ ಬಗ್ಗೆ ಅಧ್ಯಯನ ನಡೆಸಿದೆ. ಪ್ರತಿದಿನ ಸಂಸ್ಕೃತದಲ್ಲಿ ಮಾತನಾಡುವುದರಿಂದ ಮನುಷ್ಯನ ನರಗಳಿಗೆ ಹೊಸ ಚೈತನ್ಯ ಸಿಗುತ್ತದೆ. ಇದರಿಂದ ಮಧುಮೇಹ ಹಾಗೂ ಬೊಜ್ಜು ಸಮಸ್ಯೆ ನಮ್ಮಿಂದ ದೂರ ಉಳಿಯುತ್ತದೆ ಎಂದು ಅಮೆರಿಕದವರ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಆದ್ದರಿಂದ ಸಂಸ್ಕೃತ ಮಾತನಾಡಿ ನೀವು ಆರೋಗ್ಯವಾಗಿರಬಹುದು ಎಂದು ತಿಳಿಸಿದ್ದರು.

“ಸದ್ಯ, ಕಂಪ್ಯೂಟರ್​ ಕೋಡಿಂಗ್​ ಇಂಗ್ಲಿಷ್​ನಲ್ಲಿದೆ. ಒಂದೊಮ್ಮೆ ಕಂಪ್ಯೂಟರ್​ ಕೋಡಿಂಗ್​ಅನ್ನು ಸಂಸ್ಕೃತದಲ್ಲಿ ಮಾಡಿದರೆ ದೋಷವೆಂಬುದೇ ಇರುವುದಿಲ್ಲ. ಸಂಸ್ಕೃತ ಕಂಪ್ಯೂಟರ್​ಗೆ ಹೊಂದಾಣಿಕೆ ಆಗುವ ಸೂಕ್ತ ಭಾಷೆ,” ಎಂದು ಕಂಪ್ಯೂಟರ್ ಕೋಡಿಂಗ್ ಬಗ್ಗೆ ಕೂಡ ಗಣೇಶ್ ಸಿಂಗ್ ಹೇಳಿದರು.

ಸಂಸದ ಗಣೇಶ್ ಸಿಂಗ್ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಜನರಲ್ಲಿ ಮೌಢ್ಯ ತುಂಬುವ ಹೇಳಿಕೆಯಾಗಿದ್ದು ದೇಶದ ಆರ್ಥಿಕ ಹಿಂಜರಿತ, ನಿರುದ್ಯೋಗ, ಉದ್ಯೋಗ ಕಡಿತ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುವ ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಉದ್ದೇಶವಾಗಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top