fbpx
ಸಮಾಚಾರ

ಪತಿ ನಿಧನದ ದಿನವೇ ವಿಧಿವಶರಾದ ದಿ. ಉದಯ್ ಕುಮಾರ್ ಪತ್ನಿ ಕಮಲಮ್ಮ!

ಕನ್ನಡ ಚಿತ್ರರಂಗದ ಧೃವತಾರೆ ಕಲಾಕೇಸರಿ ಉದಯ್ ಕುಮಾರ್ ಅವರ ಧರ್ಮಪತ್ನಿ ಕಮಲಮ್ಮ ಉದಯ್ ಕುಮಾರ್ ನೆನ್ನೆ ಬೆಳಗ್ಗೆ 10.30ಕ್ಕೆ ದೈವಾಧೀನರಾಗಿದ್ದಾರೆ. ಅಂತಿಮ ಸಂಸ್ಕಾರದ ವಿಧಿವಿಧಾನ ಕಾರ್ಯಗಳೆಲ್ಲವೂ ಆನೇಕಲ್‌ನಲ್ಲಿ ಬುಧವಾರ ನೆರವೇರಿಸಲಾಯಿತು.

ಉದಯ್‌ ಕುಮಾರ್‌ ತೀರಿಕೊಂಡ ದಿನವೇ ಕಮಲಮ್ಮನವರೂ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಪುತ್ರ ತಿಳಿಸಿದ್ದಾರೆ. ‘ನಮ್ಮ ತಂದೆಯವರದ್ದು ಅಕಾಲಿಕ ಮರಣ. ನಾವು ತಂದೆಯ ಶ್ರಾದ್ಧಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೆವು. ಇದ್ದಕ್ಕಿದ್ದಂತೆ ತಾಯಿ ಅಸೌಖ್ಯಕ್ಕೆ ಒಳಗಾದರು. ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ತಂದೆ ತೀರಿಕೊಂಡ ದಿನವೇ ತಾಯಿಯೂ ನಮ್ಮನ್ನು ಅಗಲಿದರು,’ ಎಂದು ಉದಯ್‌ ಕುಮಾರ್‌, ಕಮಲಮ್ಮ ದಂಪತಿಯ ಪುತ್ರ ವಿಕ್ರಮ್‌ ತಿಳಿಸಿದ್ದಾರೆ.

ಉದಯ್‍ಕುಮಾರ್ 60-70ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಹೆಸರು ಮಾಡಿದ್ದರು. ಉದಯ್ ಕುಮಾರ್ ಅವರು ನಾಯಕ ನಟ ಸೇರಿದಂತೆ, ವಿಲನ್, ಪೋಷಕ ಪಾತ್ರಗಳಲ್ಲಿ ನಟಿಸಿ ಹೆಸರು ಪಡೆದಿದ್ದರು. ಉದಯ್ ಕುಮಾರ್ ಅವರಿಗೆ ಅವರ ಧರ್ಮಪತ್ನಿ ಕಮಲಮ್ಮ ಬೆನ್ನಿಗೆ ನಿಂತಿದ್ದರು.

ಪವನಸುತ ಕೇಸರಿ ಕಲಾ ಶಾಲಾ ಪ್ರತಿಷ್ಠಾನವನ್ನು ಸ್ಥಾಪಿಸಿದ್ದ ಕಮಲಮ್ಮ ಅವರು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅಂತಿಮ ದಿನಗಳವರೆಗೂ ಪ್ರತಿಷ್ಠಾನದ ಮೂಲಕ ಕಲಾ ಸೇವೆಯನ್ನು ಮುಂದುವರಿಸಿದ್ದರು. ಕಲಾಕೇಸರಿ ಹೆಸರನಲ್ಲಿ ಕನ್ನಡ ಸೇವೆಯನ್ನು, ಪ್ರತಿಷ್ಠಾನದ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top