fbpx
ಸಮಾಚಾರ

ಎರಡು ವರ್ಷಗಳ ಬಳಿಕ ಜಿಯೋ ಗ್ರಾಹಕರಿಗೆ ಶಾಕ್: ಇನ್ಮುಂದೆ ಉಚಿತ ಕರೆ ಸೌಲಭ್ಯವಿಲ್ಲ, ಆದರೆ…

ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ದರ ವಿಧಿಸಲು ಮುಂದಾಗಿದೆ. ಜಿಯೋ ಹೊರತುಪಡಿಸಿ ಉಳಿದ ನೆಟ್ ವರ್ಕ್ ಗಳ ಸಿಮ್ ಕಾರ್ಡ್ ಬಳಸುತ್ತಿರುವ ಮೊಬೈಲ್ ಫೋನ್ ಗಳಿಗೆ ಕರೆ ಮಾಡಿದರೆ ಪ್ರತಿ ನಿಮಿಷದ ವಾಯ್ಸ್ ಕಾಲ್ ಗೆ ಆರು ಪೈಸೆ ದರ ವಿಧಿಸಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಅಷ್ಟೇ ಮೊತ್ತದ ಉಚಿತ ಡೇಟಾವನ್ನು ನೀಡಲಾಗುತ್ತದೆ.

ಜಿಯೋದಿಂದ ಬಿಎಸ್‌ಎನ್‌ಎಲ್‌, ಏರ್‌ಟೆಲ್‌, ವೋಡಾಫೋನ್‌ಗೆ ಕರೆ ಮಾಡಿದರೆ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಲಾಗುತ್ತಿದ್ದು, ಜಿಯೋದಿಂದ ಜಿಯೋ ಸಂಖ್ಯೆಗೇ ಕರೆ ಮಾಡಿದರೆ ಯಾವುದೇ ಶುಲ್ಕವಿಲ್ಲ. ಆದರೆ ಗ್ರಾಹಕರಿಗೆ ಹೊರೆ ತಪ್ಪಿಸಲು ಗ್ರಾಹಕರು ಪಾವತಿಸುವ ಮೊತ್ತಕ್ಕೆ ಸಮಾನವಾದ ಡೇಟಾವನ್ನು ರಿಲಾಯನ್ಸ್‌ ಜಿಯೋ ಒದಗಿಸಲಿದೆ.

2015 ರಿಂದ ಜಿಯೋ ಉಚಿತ ಕರೆ ಸೌಲಭ್ಯವನ್ನು ಒದಗಿಸುತ್ತಿದೆ. ಇದರಿಂದ ಕಳೆದ ಮೂರು ವರ್ಷಗಳಲ್ಲಿ ಇತರ ಮೊಬೈಲ್ ಆಪರೇಟರ್‌ಗಳಾದ ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾಗಳಿಗೆ ಐಯುಸಿ ಶುಲ್ಕವಾಗಿ ಜಿಯೋ ಟೆಲಿಕಾಂ ಸಂಸ್ಥೆ ಸುಮಾರು 13,500 ಕೋಟಿ ರೂಪಾಯಿಗಳನ್ನು ಪಾವತಿಸಿದೆ. ಈ ನಷ್ಟದ ಮೊತ್ತವನ್ನು ಸರಿದೂಗಿಸಲು ಇದೇ ಮೊದಲ ಸಲ ಗ್ರಾಹಕರಿಗೆ ಶುಲ್ಕ ವಿಧಿಸಿ ಸರಿದೂಗಿಸಿಕೊಳ್ಳಲು ಜಿಯೋ ನಿರ್ಧರಿಸಿದೆ.

ಜಿಯೋ ಕರೆ ಪ್ಲಾನ್ ಹೀಗಿದೆ
ಬೇರೆ ನೆಟ್ವರ್ಕ್​ಗಳಿಗೆ ಕರೆ ಮಾಡಿದರೆ ಶುಲ್ಕ ವಿಧಿಸುವುದಾಗಿ ಹೇಳಿಕೊಂಡಿರುವ ಜಿಯೋ ನಾಲ್ಕು ಹೊಸ ಐಯುಸಿ ಪ್ಲಾನ್​ಗಳನ್ನು ಪ್ರಸ್ತುತಪಡಿಸಿದೆ. ಅದರ ಅನ್ವಯ ಡಾಟಾದ ಹೆಚ್ಚುವರಿ ಅನುಕೂಲವನ್ನೂ ಮಾಡಿಕೊಟ್ಟಿದೆ.. ಈ ಪ್ಲಾನ್ ಖರೀದಿಸಿದ ಗ್ರಾಹಕರಿಗೆ ಡೇಟಾವನ್ನು ಉಚಿತವಾಗಿ ನೀಡುವುದಾಗಿ ಜಿಯೋ ಹೇಳಿದೆ. 10 ರೂ ಪ್ಲಾನ್ ಹಾಕಿದರೆ 124 ನಿಮಿಷ(1 ಜಿಬಿ ಉಚಿತ), 20 ರೂ. ಪ್ಲಾನಿಗೆ 249 ನಿಮಿಷ(2ಜಿಬಿ ಡೇಟಾ), 50 ರೂ. 656 ನಿಮಿಷ(5ಜಿಬಿ ಡೇಟಾ), 100 ರೂ. ಪ್ಲಾನ್ ಹಾಕಿದರೆ 1,362 ನಿಮಿಷ(10 ಜಿಬಿ) ಮಾತನಾಡಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top