fbpx
ಸಮಾಚಾರ

ದೇವಸ್ಥಾನ ಅಪವಿತ್ರಗೊಳಿಸಿದನೆಂದು ದಲಿತ ವ್ಯಕ್ತಿಯ ಮೇಲೆ ಹಲ್ಲೆ, ಬೆತ್ತಲೆ ಮೆರವಣಿಗೆ: ಸಿಎಂ ಖಂಡನೆ, ಇಬ್ಬರ ಬಂಧನ.

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ವೀರನ ಪುರದಲ್ಲಿ ದೇವರ ವಿಗ್ರಹ ಧ್ವಂಸಗೊಳಿಸಿದ್ದಾನೆ ಎಂಬ ಆರೋಪದಲ್ಲಿ 38 ರ ಹರೆಯದ ದಲಿತ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಥಳಿಸಿದ ಕೃತ್ಯವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಖಂಡಿಸಿದ್ದು, ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದಾರೆ.

 

 

ಈ ಬಗ್ಗೆ ಟ್ವೀಟ್​ ಮಾಡಿರುವ ಕುಮಾರಸ್ವಾಮಿ, “ಗುಂಡ್ಲಪೇಟೆ ತಾಲ್ಲೂಕಿನಲ್ಲಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ಮಾಡಿರುವುದು ಅತ್ಯಂತ ಅಮಾನವೀಯ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ತಿಳಿಸಿದ್ದೇನೆ. ಸಮಾಜದಲ್ಲಿ ಜಾತಿ ವೈಷಮ್ಯ ಇನ್ನೂ ಮುಂದುವರಿದಿರುವುದು ದುರದೃಷ್ಟಕರ. ಇಂಥ ಕೃತ್ಯಗಳನ್ನು ಒಕ್ಕೊರಲಿನಿಂದ ವಿರೋಧಿಸಬೇಕು,” ಎಂದು ಬರೆದುಕೊಂಡಿದ್ದಾರೆ.

ಜೂನ್​ 3ರಂದು ಈ ಪ್ರಕರಣ ನಡೆದಿತ್ತಾದರೂ ವಿಡಿಯೋ ತುಣುಕು ಜೂ.11ಕ್ಕೆ ಹೊರ ಬಂದಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು. ಗುಂಡ್ಲುಪೇಟೆ ತಾಲ್ಲೂಕಿನ ಶ್ಯಾನಾಡ್ರಹಳ್ಳಿಯ ಪ್ರತಾಪ್​ ಸಂತ್ರಸ್ತ. ಪ್ರತಾಪ್​ ರಾಜ್​ ಅವರಿಗೆ ರಕ್ತ ಬರುವಂತೆ ಥಳಿಸಿ, ನಂತರ ಬೆತ್ತಲೆ ಮರೆವಣಿಗೆ ಮಾಡಲಾಗಿತ್ತು. ಆ ಬಳಿಕ ಹಲ್ಲೆಗೊಳಗಾದ ವ್ಯಕ್ತಿಯ ಸಂಬಂದಿಯೊಬ್ಬರು ಗುಂಡ್ಲುಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಅರ್ಚಕ ಶಿವಪ್ಪ ಹಾಗೂ ಪುಟ್ಟಸ್ವಾಮಿ ಬಂಧಿತರು. ಉಳಿದ ನಾಲ್ವರು ತಲೆ ಮರೆಸಿಕೊಂಡಿದ್ದಾರೆ. ಹಲ್ಲೆಗೊಳಗಾದ ಪ್ರತಾಪ್‌ ಅವರ ಚಿಕ್ಕಪ್ಪನ ಮಗ ಕಾಂತರಾಜು ಅವರು ನೀಡಿರುವ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ದೂರಿನಲ್ಲೇನಿದೆ:
ದೇವಸ್ಥಾನ ಅಪವಿತ್ರಗೊಳಿಸಿದ ಎಂಬ ಕಾರಣಕ್ಕೆ ಪ್ರತಾಪ್‌ನ ಜಾತಿ ನಿಂದನೆ ಮಾಡಿ, ಬೆತ್ತಲೆ ಗೊಳಿಸಿ, ಸಾರ್ವಜನಿಕ ರಸ್ತೆಯಲ್ಲಿ ಮೆರವಣಿಗೆ ಮಾಡಲಾಗಿದೆ ಎಂದು ಕಾಂತರಾಜು ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ದೇವಸ್ಥಾನ ಪ್ರವೇಶ
ರಾತ್ರಿ ಸ್ಕೂಟರ್‌ನಲ್ಲಿ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ ಚಿನ್ನದ ಸರ ಮತ್ತು ಹಣವನ್ನು ಕಸಿದಿದ್ದಾರೆ. ಬಳಿಕ ಶನೇಶ್ವರ ದೇವಸ್ಥಾನದ ಆವರಣಕ್ಕೆ ಬಂದು ಮಲಗಿದ್ದರು. ಬೆಳಗ್ಗೆ ಅರ್ಚಕರು ಬಂದಾಗ ದಲಿತನೆಂದು ತಿಳಿದು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ದೇವಸ್ಥಾನಕ್ಕ್ಕೆ ಬಂದಾಗಲೇ ಬಟ್ಟೆ ಇರಲಿಲ್ಲ:
ಪ್ರತಾಪ್​ ದೇವಸ್ಥಾನಕ್ಕೆ ಬಂದು ದೇವರ ವಿಗ್ರಹ ನಾಶ ಮಾಡಿದ್ದರು ಎಂಬುದಾಗಿ ಜೂ.3ರಂದು ದೂರು ದಾಖಲಾಗಿದೆ. ದೇವಸ್ಥಾನದಲ್ಲಿರುವಾಗಲೇ ಪ್ರತಾಪ್​ ಮೈಮೇಲೆ ಬಟ್ಟೆ ಇರಲಿಲ್ಲ. ಬಟ್ಟೆ ನೀಡಲು ಹೋದರೆ ಗ್ರಾಮಸ್ಥರಿಗೆ ಪ್ರತಾಪ್​ ಹೊಡೆಯಲು ಬಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top