fbpx
ಸಮಾಚಾರ

ರೈತರ ಅಕೌಂಟ್‍ನಿಂದ ಸಾಲ ಮನ್ನಾ ಆದ ಹಣ ವಾಪಸ್- ರೈತರಿಗೆ ಶಾಕ್

ಲೋಕಸಭಾ ಚುನಾವಣೆಗೂ ಕೆಲ ದಿನಗಳ ಮುನ್ನ ರೈತರ ಖಾತೆಗಳಿಗೆ ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯಡಿ ರೈತರ ಖಾತೆಗಳಿಗೆ ಜಮೆಯಾದ ಹಣ ಚುನಾವಣೆ ಮುಗಿಯುತ್ತಿದ್ದಂತೆ ಅಕೌಂಟ್ ನಿಂದ ಹಿಂದಕ್ಕೆ ಪಡೆಯಲಾಗಿದೆ. ಯಾದಗಿರಿ ಜಿಲ್ಲೆಯ ಸುಮಾರು 200 ರೈತರ ಖಾತೆಯ ಹಣ ರಿ ಫಂಡ್ ಆಗಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರೈತರೊಬ್ಬರ ಖಾತೆಗೆ ಬಂದಿದ್ದ ಸಾಲ ಮನ್ನಾದ ಹಣ, ಹೇಗೆ ಬಂದಿದೆಯೋ ಹಾಗೇ ವಾಪಸ್ ಆಗಿದೆ. ಮುಖ್ಯಮಂತ್ರಿ ಸಾಲ ಮನ್ನಾ ಯೋಜನೆಯಡಿಯಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ರೈತರ ಖಾತೆಗೆ ಹಣ ಜಮಾ ಆಗಿತ್ತು. ಆದ್ರೆ ಚುನಾವಣೆ ಮುಗಿದ ಬಳಿಕ ರೈತರ ಖಾತೆಯಲ್ಲಿದ್ದ ಹಣ ಇದ್ದಕ್ಕಿದ್ದಂತೆ ಮಾಯವಾಗಿದೆ.

ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿನ ಎಸ್‌ಬಿಐ ಖಾತೆಗೆ ಶಿವಪ್ಪ ಕಾವಲಿ ಅವರ ಖಾತೆಗೆ ಜ. 29 ರಂದು 50 ಸಾವಿರ ರೂ. ಹಾಗೂ ಏ. 17ರಂದು 44,926 ರೂ. ಜಮಾ ಮಾಡಲಾಗಿದೆ. ಮೇ 23ರಂದು ಬ್ಯಾಂಕಿಗೆ ಹೋಗಿ ಖಾತೆ ಪರಿಶೀಲನೆ ನಡೆಸಿದ ವೇಳೆ ಹಣ ವಾಪಸ್ ಹೋಗಿದೆ. ಈ ಗ್ರಾಮದಲ್ಲಿರುವ ಶಾಖೆಯಲ್ಲಿ ಸುಮಾರು 200ಕ್ಕೂ ಅಧಿಕ ರೈತರಿಗೆ ಹೀಗೆ ಆಗಿದೆ ಎಂದು ತಿಳಿದು ಬಂದಿದೆ.

ಬ್ಯಾಂಕ್ ಅಧಿಕಾರಿಗಳು ಹೇಳಿದ್ದೇನು?
ಸಾಲ ಮನ್ನಾ ಘೋಷಣೆ ವೇಳೆ ಕೆಲ ಬ್ಯಾಂಕ್ ಗಳು ತಪ್ಪಾಗಿ ಫಲಾನುಭಿಗಳನ್ನು ಪಟ್ಟಿ ಮಾಡಿ ಕಳುಹಿಸಿದ ಪರಿಣಾಮ ಗೊಂದಲವಾಗಿದೆ. ಸುಸ್ತಿದಾರರು, ಅರ್ಹ ಫಲಾನುಭವಿಗಳ ಬಗ್ಗೆ ರಾಜ್ಯಮಟ್ಟದ ಬ್ಯಾಂಕ​ರ್‍ಸ್ ಕಮಿಟಿ(ಎಸ್‌.ಎಲ್‌.ಬಿ.ಸಿ.) ನೀಡಿದ ಸೂಚನೆಯಂತೆ ಮತ್ತೊಮ್ಮೆ ನಿಯಮಾವಳಿಗಳನ್ನು ಪರಿಶೀಲಿಸಿ, ಫಲಾನುಭವಿಗಳ ಪಟ್ಟಿಪರಿಷ್ಕರಿಸಲಾಗಿದೆ. ನಂತರ ಫಲಾನುಭವಿಗಳಲ್ಲದ ಖಾತೆಗೆ ಜಮೆಯಾಗಿದ್ದ ಸಾಲದ ಹಣ ವಾಪಸ್‌ ಮಾಡಲಾಗಿದೆ. ಆದರೂ ಒಂದು ವೇಳೆ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದ್ದರೆ ಅವರ ಮನವಿಯನ್ನು ಪರಿಶೀಲಿಸಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top