fbpx
ಸಮಾಚಾರ

ಇಂದು ಶ್ರುತ ಪಂಚಮಿ- ಇದರ ಬಗ್ಗೆ ನಿಮಗೆಷ್ಟು ಗೊತ್ತು?

ಶ್ರುತ ಪಂಚಮಿಯ ಸಂಕ್ಷಿಪ್ತ ಹಿನ್ನಲೆ: ಜೈನಧರ್ಮದಲ್ಲಿ ಆತ್ಮಶುದ್ಧಿ ಆತ್ಮ ಕಲ್ಯಾಣಕ್ಕಾಗಿ ವಿಶೇಷ ಸಂದರ್ಭಗಳಲ್ಲಿ ಶುಭ ಮೂಹರ್ತದಲ್ಲಿ ಧರ್ಮಾಚರಣೆ ಆಚರಿಸುತ್ತಾರೆ. ಅದನ್ನು ಪವ೯ ಅಥವಾ ಹಬ್ಬ ಎಂದು ಕರೆಯುತ್ತಾರೆ.

ಜೈನಧರ್ಮದಲ್ಲಿ ಸಾಧಾರಣ ಪರ್ವ,ಶಾಶ್ವತ ಪರ್ವ ಮತ್ತು ನೈಮಿತ್ತಿಕ ಪರ್ವ ಎಂಬ ಮೂರು ಬಗೆಯ ಹಬ್ಬಗಳಿವೆ. ಅವುಗಳಲ್ಲಿ ನೈಮಿತ್ತಿಕ ಪರ್ವದಲ್ಲಿ ಶ್ರುತ ಪಂಚಮಿ ಪರ್ವ ಅಥವಾ ಹಬ್ಬ ಬರುತ್ತದೆ. ಶ್ರುತ ಪಂಚಮಿ ಹಿನ್ನಲೆ: ಜೈನ ಆಗಮಗಳಿಗೆ ಶ್ರುತ ಎಂದು ಹಾಗೂ ಜೈನವೇದಗಳೆಂದು ಕರೆಯುತ್ತಾರೆ. ಶ್ರುತ ಎಂದರೆ ಜೈನ ಧರ್ಮದ ತತ್ವ ಸಿದ್ಧಾಂತ ವಿಚಾರಗಳು. ಈ ವಿಚಾರಗಳನ್ನು ಭ. ತೀರ್ಥಂಕರರು ಈ ಲೋಕದಲ್ಲಿ ಪ್ರಸಾರ ಮಾಡುತ್ತಾರೆ.ಬಳಿಕ ಅವರು ಹಾಗೂ ಅವರ ನೇರ ಶಿಷ್ಯ ಪರಂಪರೆಯ ಮೂಲಕ ಮುಂದಿನ ಪೀಳಿಗೆಗೆ ಅವು ಪ್ರಸಾರ ಹೊಂದುತ್ತವೆ. ಆಯಾ ಕಾಲಕ್ಕೆ ಜನರಿಗೆ ಅರ್ಥವಾಗುವ ರೀತಿಯಲ್ಲಿ ತೀರ್ಥಂಕರರು ಪುನ:ಪುನ: ಆಗಮಗಳನ್ನು ಪ್ರಸಾರ ಮಾಡಿದರೂ ಸಹ ಅವು ಮೂಲತಃ ಒಂದೇ ತತ್ವ ಸಿದ್ಧಾಂತಗಳನ್ನು ಹೊಂದಿರುತ್ತವೆ.

ಪ್ರಾಚೀನ ಕಾಲದಲ್ಲಿ ಜ್ಞಾನವನ್ನು ಶ್ರುತ ರೂಪದಲ್ಲಿ ಗುರುವಿನಿಂದ ಶಿಷ್ಯನಿಗೆ ಕಲಿಸುತ್ತಿದ್ದರು. ಇವನ್ನು ಬರೆದಿಡುವ ಪದ್ಧತಿ ಇರಲಿಲ್ಲ. ಕ್ರಮೇಣ ಮರೆವಿನಿಂದ ಜ್ಞಾನವನ್ನು ಕಳೆದುಕೊಳ್ಳ ತೊಡಗಿದರು. ಆಗ ಜೈನಾಗಮಗಳನ್ನು ಲಿಪಿ ಕರಿಸುವ ಮಹತ್ಕಾರ್ಯ ನಡೆಯಿತು. ಅದರ ಹಿನ್ನೆಲೆಯಲ್ಲಿ ಈ ಶ್ರುತಪಂಚಮಿ ಹಬ್ಬ ಆಚರಿಸುವ ಪದ್ದತಿ ಬೆಳೆದು ಬಂದಿತು. ಅದನ್ನು ನಾವು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

ಜೈನಾಗಮಗಳನ್ನು ಅಂಗ ಮತ್ತು ಅಂಗಬಾಹ್ಯ ಎಂದು ಎರಡು ಮುಖ್ಯ ಶಾಖೆಗಳಲ್ಲಿ ವಿಭಾಗಿಸಲಾಗುತ್ತದೆ.ಅವು:-
12 ಅಂಗಗಳು : ಆಚಾರಾಂಗ,ಸೂತ್ರಕೃತಾಂಗ, ಸ್ಥಾನಾಂಗ,ಸಮವಾಯಾಂಗ, ವ್ಯಾಖ್ಯಾಪ್ರಜ್ಞಪ್ತಂಗ, ಜ್ಞಾತೃಕಥಾಂಗ, ಉಪಸಕಾಧ್ಯಯನಾಂಗ, ಅಂತಕೃದ್ಧಶಾಂಗ,ಅನುತ್ತರೌಪ ಪಾದಿಕದಶಾಂಗ,ಪ್ರಶ್ನ ವ್ಯಾಕರಣಾಂಗ, ವಿಪಾಕಸೂತ್ರಾಂಗ,ದೃಷ್ಟಿ ವಾದಾಂಗ.

14 ಅಂಗಬಾಹ್ಯ ಶಾಸ್ತ್ರಗಳು: ಸಾಮಾಯಿಕ,
ಚತುವಿ೯ಂಶತಿಸ್ತವ, ವಂದನಾ, ಪ್ರತಿಕ್ರಮಣ,ವೈನಯಿಕ, ಪ್ರತಿಕಮ೯,ದಶವೈಶಾಲಿಕ, ಉತ್ತರಾಧ್ಯಯನ, kalpya ವ್ಯವಹಾರ, kalpyakalpya,ಮಹಾkalpya, ಪುಂಡರೀಕ,ಮಹಾ ಪುಂಡರೀಕ,ಆಶೀತಿಕಗಳು.
ಒಟ್ಟಾರೆ ಇವು ಭ. ತೀರ್ಥಂಕರರಿಂದ ಬೋಧಿಸಲ್ಪಟ್ಟ ಆಧಾರಗಳಿಂದ ಸಂಗ್ರಹಿತವಾಗಿವೆ.

ಶ್ರುತದ ಸಂರಕ್ಷಣೆ:
ಭ.ಮಹಾವೀರ ನಿವಾ೯ಣದ ಬಳಿಕ 162 ವರ್ಷಗಳವರೆಗೆ ಮೂರು ಜನ ಕೇವಲಿಗಳು ( ಗೌತಮ, ಸುಧರ್ಮ, ಜಂಬೂ) ಹಾಗೂ 5 ಜನ ಶ್ರುತಕೇವಲಿ ಗಳು (ವಿಷ್ಣು, ನಂದಿ, ಅಪರಾಜಿತ, ಗೋವರ್ಧನ, ಭದ್ರಬಾಹು)ಮೂಲಕ ಆಗಮ ರಾಶಿ ಪ್ರವಹಿಸಿ ಬಂದಿತು.

ಭದ್ರಬಾಹುಗಳ ನಂತರ ವಿಶಾಖಾ,ಪ್ರೋಷ್ಠಿಲಾ,ಕ್ಷತ್ರಿಯಾ, ಜಯಸೇನ,ನಾಗಸೇನ, ಸಿದ್ದಾರ್ಥ,ವಿಜಯಾ,ಬುದ್ಧಿ ಲಿಂಗ,ದೇವ,ಧರ್ಮಸೇನ ಎಂಬ ದಶಪೂರ್ವಧಾರಿ ಆಚಾಯ೯ರುಗಳ ಮೂಲಕ ಆಗಮಗಳ ಪರಂಪರೆ ಸ್ವಲ್ಪ ತ್ರುಟಿತವಾಗಿ 183ವರ್ಷಗಳ ಕಾಲದವರೆಗೆ ಮುಂದುವರೆಯಿತು.ಹೀಗೆ ನಿರಂತರ ಒಟ್ಟು 345 ವರ್ಷಗಳ ಕಾಲ ಜೈನಾಗಮ ರಕ್ಷಿಸಲ್ಪಟ್ಟಿತು.

ತದನಂತರ ದಶಪೂರ್ವಧಾರಿಯಾದ ಧರ್ಮಸೇನ ಕಾಲದ ನಂತರ (ಕ್ರಿಸ್ತಪೂರ್ವ182) ನಕ್ಷತ್ರ, ಜಯಪಾಲ, ಪಾಂಡವ, ಧ್ರುವಸೇನ,ಕಂಸಚ ಎಂಬ ಐದು ಜನ ಆಚಾರ್ಯರು 11 ಅಂಗಗಳ ಬಲ್ಲಿದರಾಗಿ 123 ವರ್ಷಗಳ ವರೆಗೆ ಅಂದರೆ ಕ್ರಿಸ್ತ ಪೂರ್ವ 59.ಶ್ರುತಗಳ ಪ್ರಚಾರ ಮಾಡಿದರು.
ಇದಾದ ಬಳಿಕ ಸುಭದ್ರ, ಯಶೋಭದ್ರ,ಭದ್ರಬಾಹು ಮತ್ತು ಲೋಹಾ ಎಂಬ ನಾಲ್ಕು ಜನ ಆಚಾರ್ಯರು 97 ವರ್ಷಗಳವರೆಗೆ ಜೈನಾಗಮವನ್ನು ಪ್ರಚಾರ ಮಾಡಿದರು.ಇವರು ಹತ್ತು ಅಂಗಗಳು ಜ್ಞಾನ ಹೊಂದಿದ್ದರು.

ಬಳಿಕ ಏಕಾಂಗದೇವ ಶಾಸ್ತ್ರ ತಜ್ಞರಾದ ಅಹಿಬಲ, ಮಾಘನಂದಿ,ಪುಷ್ಪದಂತ,ಭೂತಬಲಿ ಎಂಬ ಆಚಾರ್ಯರು 118 ವರ್ಷಗಳವರೆಗೆ ಒಂದು ಜೈನಾಗಮ ಪ್ರಚಾರ ಮಾಡಿದರು. ಒಟ್ಟಾರೆ 683 ವರ್ಷ ಅಂದರೆ ಕ್ರಿಸ್ತಶಕ 156 ನೇ ವರ್ಷದಲ್ಲಿ 12 ಅಂಗಗಳ ಪೈಕಿ ಕೇವಲ ಒಂದೇ ಒಂದು ಅಂಗ ಉಳಿದು ಅದು ಎಲ್ಲ ಅಂಗಗಳ ಸಂಗ್ರಹವಾಯಿತು. ಜೈನಾಗಮಗಳ ಸಂರಕ್ಷಣೆಗಾಗಿ ಈ ಮಧ್ಯೆ ಪಾಟಲಿಪುತ್ರ ,ಮಧುರೆ ಹಾಗೂ ಒರಿಸ್ಸಾದ ಕಂದಗಿರಿಯಲ್ಲಿ ಸಭೆಗಳು ನಡೆದಿದ್ದವು.

ದಿಗಂಬರ ಜೈನ ಸಂಪ್ರದಾಯದ ಪ್ರಕಾರ ಮೂಲ ಆಗಮಗಗಳು ಲುಪ್ತವಾಗಿ ಅವುಗಳ ಆಧಾರದ ಮೇಲೆ ನಾಲ್ಕು ಅನುಯೋಗಗಳಾದ ಪ್ರಥಮ,ಕರುಣಾ,ದ್ರವ್ಯ, ಚರಣ ಎಂಬುವು ರಚಿತವಾದವು. ಅವುಗಳನ್ನು ಬರದಿಡಬೇಕೆಂಬ ಇಚ್ಛೆಯಿಂದ ಆ. ಪುಷ್ಪದಂತ ಮತ್ತು ಭೂತಬಲಿ ಎಂಬ ಇಬ್ಬರು ಆಚಾರ್ಯರು ತಮಗೆ ತಿಳಿದಿದ್ದ ಆಗಮ ಭಾಗವನ್ನು ವ್ಯವಸ್ಥಿತವಾಗಿ ಬರೆದಿಡಲು ಆರಂಭಿಸಿದರು.ಇವರು ಅಷ್ಟಪ್ರಾಭ್ರತ,ಮಹಾಬಂಧ ಮೊದಲಾದ ಗ್ರಂಥಗಳನ್ನು ರಚಿಸಿದರು ಹಾಗೂ ತಾವು ರಚಿಸಿದ ಜೈನಾಗಮ ಗ್ರಂಥಗಳನ್ನು ಅಲಂಕರಿಸಿ ಒಂದೆಡೆ ಇಟ್ಟು ಜೇಷ್ಠ ಶುದ್ಧ ಪಂಚಮಿ ದಿನದಂದು ಚತು: ಸಂಘದವರನ್ನೆಲ್ಲ ಕರೆಯಿಸಿದರು. ಜೈನಾಗಮಗಳನ್ನು ಬಹಳ ಶ್ರದ್ಧೆ ವೈಭವಗಳಿಂದ ಪೂಜಿಸಿದರು.

ಅಂದಿನಿಂದ ಆ ದಿನವನ್ನು ಶ್ರುತ ಪಂಚಮಿ ಎಂದು ಕರೆದು ಪ್ರತಿ ವರ್ಷ ಹಿಂದೂಗಳ ಸರಸ್ವತಿ ಪೂಜೆಯಂತೆ ಶಾಸ್ತ್ರಗ್ರಂಥಗಳನ್ನು ಪೂಜಿಸುವ ಸಂಪ್ರದಾಯ ಜೈನರಲ್ಲಿ ಬೆಳೆದು ಬಂದಿದ್ದು ಗಮನಾಹ೯ಸಂಗತಿ. ಜೈನಾಗಮ ನಮ್ಮ ಏಳಿಗೆಗೆ ಕಾರಣ ಆದ್ದರಿಂದ ಇವುಗಳನ್ನು ಉಳಿಸಿ ಬೆಳೆಸಿದ ಗಣಧರಾದಿ ಆಚಾರ್ಯ ಪರಂಪರೆಗೆ ಕೃತಜ್ಞತೆ ವ್ಯಕ್ತ ಪಡಿಸುವುದೇ ಶ್ರುತ ಪಂಚಮಿ ಆರಾಧನೆಯ ಹಿಂದಿನ ಉದ್ದೇಶ.

ಶ್ರುತಗಳಿಗೆ ನಾವು ಶ್ರುತಸ್ಕಂದ ನೋಂಪಿಯ ಆಚರಣೆ ಮೂಲಕ ಗೌರವ ತೋರಿಸುತ್ತಿದ್ದೇವೆ. ಇದನ್ನು ನಾವು ಶ್ರುತಸ್ಕಂದ ನೋಂಪಿಯ ಕತೆಯಲ್ಲಿ ಕಾಣುತ್ತೇವೆ.ಈ ನೋಂಪಿಯನ್ನು ಕಾರ್ತಿಕ ಶುಕ್ಲ ಪಕ್ಷದ ಚೌತಿ, ಪಂಚಮಿ, ಷಷ್ಟಿಯಂದು ನಡೆಸಲಾಗುವುದು. ಆದರೆ ನಾವು ಶ್ರುತಪಂಚಮಿ ದಿವಸವೇ ಆ ನೋಂಪಿಯನ್ನು ಆಚರಿಸುತ್ತಾ ಬಂದಿದ್ದೇವೆ.ಇದರ ನಿಮಿತ್ತ arghya ಕೊಡುವ ಪದ್ಧತಿ ನಮ್ಮಲ್ಲಿದೆ . ಇದು ನಮ್ಮ ಜೈನ ಸಾಹಿತ್ಯ ಪರಂಪರೆಯ ವೈಜ್ಞಾನಿಕವಾಗಿ ಹುಟ್ಟಿ ಬೆಳೆದು ಬಂದ ಸಂಗತಿಯೂ ಆಗಿದೆ. ಇದು ನಮಗೆ ಹೆಮ್ಮೆಯ ವಿಚಾರ. ಸದ್ಧಮ೯ಬಂಧುಗಳೆ ಶ್ರುತಪಂಚಮಿಯ ಹಾರ್ದಿಕ ಶುಭಾಶಯಗಳು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top