fbpx
ಸಮಾಚಾರ

“ರಾಜ್ಯದ ಒಬ್ಬ ದಲಿತ ಸಂಸದನಿಗೆ ಸಚಿವ ಸ್ಥಾನ ಕೊಡಿಸುತ್ತೇವೆ, ತಾಕತ್ತಿದ್ದರೆ ಪರಮೇಶ್ವರ್ ಅವರನ್ನು ಸಿಎಂ ಮಾಡಿ” BSY ಸವಾಲು.

‘ದಲಿತರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಅವಕಾಶ ನೀಡಿಲ್ಲ’ ಎಂದು ಟ್ವಿಟ್ಟರ್​ನಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ತಾಕತ್ತಿದ್ದರೆ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಿ, ರಾಜ್ಯದ ಒಬ್ಬ ದಲಿತ ಸಂಸದನಿಗೆ ಸಚಿವ ಸ್ಥಾನ ಕೊಡಿಸುತ್ತೇವೆ” ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ಅರಮನೆ ‌ಮೈದಾನದಲ್ಲಿ ಮಾತನಾಡಿದ ಅವರು, “ರಾಜ್ಯದ ಮತದಾರರು ಬುಡುಬುಡಿಕೆ ನಾಟಕವನ್ನು ಒಪ್ಪುವುದಿಲ್ಲ. ರಾಜ್ಯ ಮೈತ್ರಿ ಸರ್ಕಾರ ಇದ್ದೂ ಸತ್ತಂತೆ ಇದೆ. ವಿಧಾನಸೌಧ ಖಾಲಿಯಾಗಿದೆ. ಅಭಿವೃದ್ಧಿ ನಿಂತು ಹೋಗಿದೆ‌. ” ಎಂದು ಹೇಳಿದರು.

ಇದೆ ವೇಳೆ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ “ಬಿಜೆಪಿಯ ದಲಿತ ಸಂಸದರಿಗೆ ಸಚಿವ ಸ್ಥಾನದ ಸಿಗುವುದರ ಕುರಿತು ನಿಮಗೆ ಚಿಂತೆ ಬೇಡ. ಮೊದಲು ನಿಮ್ಮ ಪಕ್ಷದವರಿಗೆ ಸೂಕ್ತ ಸ್ಥಾನ ನೀಡಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಿ. ರಾಜ್ಯದ ಒಬ್ಬ ದಲಿತ ಸಂಸದನಿಗೆ ಸಚಿವ ಸ್ಥಾನ ಕೊಡಿಸುತ್ತೇವೆ, ತಾಕತ್ತಿದ್ದರೆ ಪರಮೇಶ್ವರ್ ಅವರನ್ನು ಸಿಎಂ ಮಾಡಿ” ಎಂದು ಸಿದ್ದುಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಹೇಳಿದ್ದೇನು?
ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ದಲಿತ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಗಳ ಮೂಲಕ ಹರಿಹಾಯ್ದಿದ್ದರು.

ಡಾ ಬಿ ಆರ್ ಅಂಬೇಡ್ಕರ್ ಹೆಸರಿನಲ್ಲಿ ಬಾಯಿ ಬಡಾಯಿ ಮೂಲಕ ದಲಿತರ ಉದ್ಧಾರ ಎಂದರೆ ವಾಸ್ತವವಾಗಿ ದಲಿತರ ಉದ್ದಾರವಾಗುವುದಿಲ್ಲ. ಮೊನ್ನೆ ನಡೆದ ಚುನಾವಣೆಯಲ್ಲಿ ರಾಜ್ಯದ ಮೀಸಲು ಕ್ಷೇತ್ರಗಳಲ್ಲಿ ಕೂಡಾ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಅವರಿಗೆ ಅಭಿನಂದನೆಗಳು. ಹೀಗಿದ್ದರೂ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಒಬ್ಬ ದಲಿತ ಸಂಸದನಿಗೂ ಅವಕಾಶ ಸಿಕ್ಕಿಲ್ಲ. ಇದಕ್ಕಿಂತ ದೊಡ್ಡ ಅನ್ಯಾಯ, ದ್ರೋಹ ಬೇರೇನಿದೆ ಎಂದು ಸಿದ್ದರಾಮಯ್ಯ ತಮ್ಮ ಅಸಮಾಧಾನ, ಆಕ್ರೋಶ ಹೊರಹಾಕಿದ್ದಾರೆ.

ದಲಿತರ ಬಗ್ಗೆ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಭಾರತೀಯ ಜನತಾ ಪಕ್ಷ ಮತ್ತು ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಪ್ರಾಮಾಣಿಕವಾದ ಕಾಳಜಿ ಮತ್ತು ಬದ್ಧತೆ ಇದ್ದರೆ ಮೊದಲು ರಾಷ್ಟ್ರಮಟ್ಟದಲ್ಲಿ ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯನ್ನು ರೂಪಿಸಿ ಜಾರಿಗೆ ತರುವ ಧೈರ್ಯವನ್ನು ತೋರಿಸಲಿ. ಇದನ್ನು ಬೇಕಾದರೆ ಸವಾಲಾಗಿ ಸ್ವೀಕರಿಸಲಿ ಎಂದು ಹೇಳಿದ್ದಾರೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top