fbpx
ಸಮಾಚಾರ

“ದೇವೇಗೌಡ ,ನಿಖಿಲ್ ಸೋಲಿಗೆ ಕಾಂಗ್ರೆಸ್ ಕಾರಣ,” ಕೈ ನಾಯಕರ ವಿರುದ್ಧ ವಿಶ್ವನಾಥ್ ತೀವ್ರ ವಾಗ್ದಾಳಿ.

ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಎಚ್.ವಿಶ್ವನಾಥ್ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಇಂದು ನಾನು ನೈತಿಕ ಹೊಣೆಗಾರಿಕೆ ಹೊತ್ತು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ ವಿಶ್ವನಾಥ್ ಅವರು, ಈವರೆಗೂ ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಲೋಕಸಭಾ ಚುನಾವಣೆಯ ಫಲಿತಾಂಶ ಮೇ 23ಕ್ಕೆ ಬಂದ ಮಾರನೇ ದಿನವೇ ನಾನು ರಾಜೀನಾಮೆ ನೀಡುವುದಾಗಿ ನಮ್ಮ ವರಿಷ್ಠರಾದ ದೇವೇಗೌಡರ ಬಳಿ ಹೇಳಿದ್ದೆ. ಆಗ ಅವರು ನನ್ನ ರಾಜೀನಾಮೆಯನ್ನ ಸ್ವೀಕರಿಸಿರಲಿಲ್ಲ. ಆದ್ದರಿಂದ ನಾನು ರಾಜೀನಾಮೆ ನೀಡುವುದು ತಡವಾಯ್ತು ಎಂದು ಹೇಳಿದರು

ದೇವೇಗೌಡ, ನಿಖಿಲ್ ಸೋಲಿಗೆ ‘ಕೈ’ ಕಾರಣ:
ಮೈಸೂರು ಕ್ಷೇತ್ರದಿಂದ ದೇವೇಗೌಡರಿಗೆ ಟಿಕೆಟ್ ಕೇಳಲಾಗಿತ್ತು, ಆದರೆ, ತುಮಕೂರು ಖೆಡ್ಡಾದಲ್ಲಿ ದೇವೇಗೌಡರು ಬೀಳುವಂತೆ ಮಾಡಿದರು, ಇದಕ್ಕೆಲ್ಲ ಸಿದ್ದರಾಮಯ್ಯ ಕಾರಣ ಎಂದಿದ್ದಾರೆ. ದೇವೇಗೌಡರ ಸೋಲು ನಾಡಿನ ಸೋಲು. ಮಂಡ್ಯ ಸೋಲು ಕೂಡಾ ಕಾಂಗ್ರೆಸ್, ಜೆಡಿಎಸ್ ನಾಯಕರ ಕೊಂಕು ನುಡಿಗಳಿಂದ ಆಗಿದ್ದು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಸಮನ್ವಯ ಸಮಿತಿ ಸಿದ್ದರಾಮಯ್ಯ ಅವರ ಕೈಗೊಂಬೆ:
ಸಮನ್ವಯ ಸಮಿತಿ ಕೇವಲ ಹೆಸರಿಗೆ ಮಾತ್ರ ಸಮಿತಿ ಆಗಿದೆ ಅಷ್ಟೇ. ಸಮನ್ವಯ ಸಮಿತಿ ಸಮನ್ವಯ ಸಾಧಿಸಲು ವಿಫಲವಾಗಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಕೂಡ ಜಾರಿ ಆಗಿಲ್ಲ. ಸಮನ್ವಯ ಸಮಿತಿ ಸಿದ್ದರಾಮಯ್ಯ ಅವರ ಕೈಗೊಂಬೆ ಅಷ್ಟೇ.” ಎಂದು ಅವರು ಹೇಳಿದ್ದಾರೆ.

ಈಗ ನಾವು ಅಧಿಕಾರದಲ್ಲೇನೋ ಇದ್ದೇವೆ. ಆದರೆ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿಯಬೇಕಾದರೆ ಪಕ್ಷ ಹಾಗೂ ಸರಕಾರದ ಮಟ್ಟದಲ್ಲಿ ಹಲವು ಸ್ಥಿತ್ಯಂತರಗಳು ಅನಿವಾರ್ಯವಾಗಿವೆ. ತಪ್ಪುಗಳನ್ನು ತಿದ್ದಿಕೊಂಡು ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾಗಿರುವ ಅನಿವಾರ್ಯತೆಯನ್ನು ಮನಗಂಡು ಮೊದಲ ಹೆಜ್ಜೆಯಾಗಿ ನಾನು ಪಕ್ಷದ ರಾಜ್ಯಾಧ್ಯಕ್ಷ ಪದವಿಯಿಂದ ನಿರ್ಗಮಿಸಲು ನಿರ್ಧರಿಸಿದ್ದೇನೆ ಎಂದು ವಿಶ್ವನಾಥ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top