fbpx
ಸಮಾಚಾರ

ರಾಷ್ಟ್ರೀಯ ಶಿಕ್ಷಣ ನೀತಿ 2019 ತಿದ್ದುಪಡಿ- ಹಿಂದಿ ಕಡ್ಡಾಯಯವಲ್ಲ, ಕೇಂದ್ರ ಸರ್ಕಾರ ಯು-ಟರ್ನ್.

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ತಣ್ಣಗಾಗಿದ್ದ ಹಿಂದಿ ಹೇರಿಕೆಯ ಪರ-ವಿರೋಧದ ಚರ್ಚೆ ಇದೀಗ ಮತ್ತೆ ಕಾವು ಪಡೆದುಕೊಂಡಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಹೇರಲು ಮುಂದಾಗಿರುವ ತ್ರಿಭಾಷಾ ನೀತಿ. ಕೇಂದ್ರ ಸರ್ಕಾರದ ಈ ನೀತಿಯ ವಿರುದ್ಧ ಇದೀಗ ಕರ್ನಾಟಕ ಮಾತ್ರವಲ್ಲ ಇಡೀ ದಕ್ಷಿಣ ಭಾರತ ಸಿಡಿದೆದ್ದು ನಿಂತಿದ್ದು ರಾಜ್ಯ ನಾಯಕರು ಟೀಕಾಪ್ರಹಾರ ನಡೆಸಿದ್ದಾರೆ. ಈ ಬೆನ್ನಲ್ಲೇ ಹಿಂದಿ ಭಾಷೆ ಕಡ್ಡಾಯ ಕಲಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಯುಟರ್ನ್ ಹೊಡೆದಿದೆ.

ಕಸ್ತೂರಿ ರಂಗನ್‌ ಸಿದ್ಧಪಡಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2019ರ ಡ್ರಾಫ್ಟ್‌ ಕೇಂದ್ರ ಸಂಪುಟದಲ್ಲಿ ಸಲ್ಲಿಕೆಯಾಗುತ್ತಿದ್ದಂತೆ ರಾಷ್ಟ್ರಾದ್ಯಂತ ಪ್ರದೇಶಿಕ ಭಾಷಾ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಇದೀಗ ಈ ನೀತಿಯ ಡ್ರಾಫ್ಟ್‌ಅನ್ನು ಕೇಂದ್ರ ಸರಕಾರ ಬದಲಾಯಿಸಿದ್ದು, ಹಿಂದಿ ಐಚ್ಛಿಕ ಭಾಷೆಯಾಗಿ ಕಲಿಸಿದರೆ ಸಾಕು ಎಂದು ತಿದ್ದುಪಡಿ ಮಾಡಿದೆ.. ಹಿಂದಿ ಭಾಷೆ ವಿದ್ಯಾರ್ಥಿಯ ಆಯ್ಕೆಯ ವಿಷಯವಾಗಿರುತ್ತದೆ ಹೊರತು ಕಡ್ಡಾಯವಲ್ಲ ಎಂದು ಹೇಳಿದ್ದು ಈ ಮೂಲಕ ಹಿಂದಿಯನ್ನೇ ಕಲಿಯಬೇಕು ಎಂಬ ಅಂಶವನ್ನು ಈಗ ಕೈಬಿಡಲಾಗಿದೆ.

ಹೊಸ ಶಿಕ್ಷಣ ನೀತಿಯ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವ ಪ್ರಕಾಶ್‌ ಜಾವಡೇಕರ್‌, ”ಇದು ತಜ್ಞರ ಸಮಿತಿಯು ತಯಾರಿಸಿರುವ ಕರಡು ಪ್ರತಿಯಾಗಿದ್ದು, ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆದು ಸೂಕ್ತ ತಿದ್ದುಪಡಿ ಮಾಡಿದ ನಂತರವಷ್ಟೇ ಕೇಂದ್ರಕ್ಕೆ ಸಲ್ಲಿಸುತ್ತೇವೆ. ಯಾವುದೇ ಭಾಷೆಯನ್ನು ಯಾರ ಮೇಲೂ ಬಲವಂತವಾಗಿ ಹೇರುವ ಇರಾದೆ ಸರ್ಕಾರಕ್ಕಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಏನಿದು ಕರಡು:
ಇಸ್ರೋದ ಮಾಜಿ ಮುಖ್ಯಸ್ಥರಾದ ಕೆ. ಕಸ್ತೂರಿ ರಂಗನ್‌ ಅವರ ಸಮಿತಿಯು ಹಿಂದಿಯೇತರ ರಾಜ್ಯಗಳಲ್ಲಿ ಸ್ಥಳೀಯ ಭಾಷೆ, ಇಂಗ್ಲಿಷ್‌ನ ಜೊತೆಗೆ ಹಿಂದಿಯನ್ನು ಕಡ್ಡಾಯವಾಗಿ ಬೋಧಿಸಬೇಕು ಎಂದೂ ಹಾಗೆಯೇ ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್‌ನ ಜೊತೆಗೆ ಆಧುನಿಕ ಭಾರತದ ಯಾವುದಾದರೂ ಒಂದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಿದೆ. ಈ ಕರಡು ಶುಕ್ರವಾರವಷ್ಟೇ ಬಿಡುಗಡೆಗೊಂಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top