fbpx
ಸಮಾಚಾರ

ಕೇಂದ್ರದ ಹಿಂದಿ ಭಾಷೆ ಕಡ್ಡಾಯ ಕರಡು ವಿರುದ್ಧ ದಕ್ಷಿಣ ರಾಜ್ಯಗಳಲ್ಲಿ ಭಾರೀ ವಿರೋಧ.

ಹಿಂದಿ ಭಾಷೆ ಮಾತನಾಡದ ರಾಜ್ಯಗಳಲ್ಲಿ ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್‌ನ ಜತೆಗೆ ಹಿಂದಿಯನ್ನು ಕಡ್ಡಾಯವಾಗಿ ಬೋಧಿಸಬೇಕು ಎಂಬ ರಾಷ್ಟ್ರೀಯ ಶಿಕ್ಷಣ ನೀತಿಯ ನೂತನ ಕರಡು ದಕ್ಷಿಣ ರಾಜ್ಯಗಳಲ್ಲಿ ಭಾರಿ ವಿರೋಧಕ್ಕೆ ಕಾರಣವಾಗಿದೆ.

ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ಕರಡು ಶಿಕ್ಷಣ ನೀತಿ ನೂತನ ಕೇಂದ್ರ ಸಚಿವ ರಮೇಶ್​ ಪೋಕ್ರಿಯಾಲ್​ ನಿಶಾಂಕ್​ ಅವರಿಗೆ ಶುಕ್ರವಾರ ಸಲ್ಲಿಕೆಯಾಗಿದ್ದು, ಅದರಲ್ಲಿನ ಶಿಕ್ಷಣದಲ್ಲಿ ಹಿಂದಿಯನ್ನು ತೃತೀಯ ಭಾಷೆಯಾಗಿ ಕಡ್ಡಾಯ ಮಾಡಬೇಕೆಂಬ ಪ್ರಸ್ತಾಪ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಟ್ವಿಟರ್​ಗಳಲ್ಲಂತೂ ಈ ಕರಡು ವಿರುದ್ಧ ಅಭಿಯಾನವೇ ಶುರುವಾಗಿದೆ. ಅಲ್ಲದೆ, ಹಲವು ರಾಜಕೀಯ ಮುಖಂಡರೂ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯಾರೊಬ್ಬರೂ ಯಾವುದೇ ವಿಚಾರವನ್ನೂ ಯಾರ ಮೇಲೆಯೂ ಹೇರಬಾರದು. ಭಾಷೆಯ ಕಲಿಕೆ ಅವರವರ ವೈಯಕ್ತಿಕ ಆಯ್ಕೆ, ಆಸಕ್ತಿಗೆ ಬಿಟ್ಟಿದ್ದು.. ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ, ಇತರ ಭಾಷೆಗಳಂತೆ ಅದು ಒಂದು ಅಧಿಕೃತ ಭಾಷೆ ಅಷ್ಟೇ. ಹಾಗೆ ಕಡ್ಡಾಯ ಮಾಡಬೇಕು ಎಂದರೆ ಹಿಂದಿಯನ್ನೇ ಏಕೆ ಮಾಡಬೇಕು? ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಏನಿದು ಕರಡು:
ಇಸ್ರೋದ ಮಾಜಿ ಮುಖ್ಯಸ್ಥರಾದ ಕೆ. ಕಸ್ತೂರಿ ರಂಗನ್‌ ಅವರ ಸಮಿತಿಯು ಹಿಂದಿಯೇತರ ರಾಜ್ಯಗಳಲ್ಲಿ ಸ್ಥಳೀಯ ಭಾಷೆ, ಇಂಗ್ಲಿಷ್‌ನ ಜೊತೆಗೆ ಹಿಂದಿಯನ್ನು ಕಡ್ಡಾಯವಾಗಿ ಬೋಧಿಸಬೇಕು ಎಂದೂ ಹಾಗೆಯೇ ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್‌ನ ಜೊತೆಗೆ ಆಧುನಿಕ ಭಾರತದ ಯಾವುದಾದರೂ ಒಂದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಿದೆ. ಈ ಕರಡು ಶುಕ್ರವಾರವಷ್ಟೇ ಬಿಡುಗಡೆಗೊಂಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top