fbpx
ಸಮಾಚಾರ

ಸುಮಲತಾ ಗೆಲುವಿಗೆ ಸ್ಟೀಮ್ ಬೋಟ್ ಕಥೆ ಹೇಳಿ ಎದುರಾಳಿಗಳಿಗೆ ಟಾಂಗ್ ಕೊಟ್ಟ ನಟ ಯಶ್.

ಅಂಬಿ ಹುಟ್ಟುಹಬ್ಬದಂದೇ ತಮ್ಮನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿದ ಮಂಡ್ಯದ ಜನರಿಗೆ ಧನ್ಯವಾದ ಸಲ್ಲಿಸಲು ಸಿಲ್ವರ್ ಜುಬಿಲಿ ಪಾರ್ಕ್‍ನಲ್ಲಿ ಸ್ವಾಭಿಮಾನಿಗಳ ವಿಜಯೋತ್ಸವ ಆಯೋಜಿಸಲಾಗಿತ್ತು. ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಸ್ಟೀಮ್ ಬೋಟ್ ಕಥೆ ಹೇಳಿ ಎದುರಾಳಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಮಲತಾ ಅಮ್ಮನವರು ಮಾಡಿದ್ದು ಸಾಮಾನ್ಯ ಹೋರಾಟವನ್ನಲ್ಲ. ಅವರು ಈ ಮಂಡ್ಯದ ಜನರನ್ನು ನಂಬಿದ್ದರು. ಎಲ್ಲರೂ ನಾವೇನೋ ಮಹಾನ್​ ಸಾಧನೆ ಮಾಡಿದ್ದೇವೆ ಎನ್ನುತ್ತಿದ್ದಾರೆ. ಆದರೆ, ನಾವು ನಮ್ಮ ಕಾಮನ್​ ಸೆನ್ಸ್​ ಬಳಸಿಕೊಂಡಿದ್ದೇವಷ್ಟೇ. ಜನರ ದನಿ ಅರ್ಥ ಮಾಡಿಕೊಂಡಿದ್ದೇವೆ. ಇಲ್ಲಿನ ಜನರಿಗೆ ಸುಮಲತಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಆಶಯವಿತ್ತು. ಸುಮಲತಾ ಅಮ್ಮನವರ ಜತೆ ಮನೆ ಮಕ್ಕಳಾಗಿ ನಾವು ನಿಂತೆವು ಎಂದು ಹೇಳಿದರು.

ಸುಮಲತಾ ಅವರು ನಿಂತಿದ್ದ ಚುನಾವಣೆ ಹೇಗಿತ್ತು ಅನ್ನೋದಕ್ಕೆ ಒಂದು ಕಥೆ ಹೇಳುತ್ತೇನೆ ಕೇಳಿ ಎಂದ ಅವರು, ಜಗತ್ತಿನಲ್ಲಿ ಮೊದಲನೇ ಸಲ ಸ್ಟೀಮ್ ಬೋಟ್ ತಯಾರಿ ಮಾಡುತ್ತಿದ್ದಾಗ ಎಲ್ಲ ಜನ ನೋಡುತ್ತಾ ನಿಂತಿದ್ದರು. ಸ್ಟೀಮ್​ನಿಂದ ಎಂಜಿನ್ ಸ್ಟಾರ್ಟ್ ಆಗುತ್ತಾ ಎಂದು ಹಾಸ್ಯ ಮಾಡಿದರು.. ಹಾಗೆಯೇ ನೋಡುತ್ತಿರುವಾಗ ಬೋಟ್ ಎಂಜಿನ್ ಸ್ಟಾರ್ಟ್ ಆಯ್ತು. ಆಗ ಎನೋ ಸ್ಟಾರ್ಟ್ ಆಗಿರಬಹುದು ಆದ್ರೆ ಮುಂದಕ್ಕೆ ಹೋಗಲ್ಲ ಅಂದರು. ಆಮೇಲೆ ಮುಂದಕ್ಕೆ ಹೋಗುತ್ತಿದ್ದಂತೆ ಇದು ನಿಲ್ಲಲ್ಲ ಹಾಗೆ ಹೋಗಿ ಎಲ್ಲಾದರೂ ಗುದ್ದಿಕೊಳ್ಳುತ್ತೆ ಎಂದರು. ಆದರೆ, ನೆನಪಿಟ್ಟುಕೊಳ್ಳಿ ಸ್ಟೀಮ್​ ಬೋಟ್​ ನಡೀತಾನೇ ಇದೆ, ಪ್ರಯಾಣ ನಡೀತಾನೇ ಇದೆ ಎಂದು ಯಶ್​ ತಿರುಗೇಟು ಕೊಟ್ಟರು.

ಹುಟ್ಟುವಾಗಲೇ ಯಾರೂ ಎಲ್ಲವನ್ನೂ ತಿಳಿದುಕೊಂಡು ಬರಲ್ಲ. ಅಂಬೆಗಾಲು ಇಟ್ಟುಕೊಂಡು ಮುಂದೆ ಬರುತ್ತಾರೆ. ನಮ್ಮ ಪ್ರತಿಸ್ಪರ್ಧಿಗಳಿಗೊಂದು ನನ್ನ ನಮ್ಮ ಮನವಿ. ಯಾರೆಲ್ಲಾ ನಮ್ಮನ್ನು ಟೀಕಿಸಿದ್ದೀರಿ. ಯಾರೆಲ್ಲಾ ನಮ್ಮ ಸುಮಕ್ಕನ ಬಗ್ಗೆ ಅವಹೇಳನವಾಗಿ ಮಾತನಾಡಿದ್ದೀರಿ ನೀವೇ ನಮಗೆ ಕೆಲಸ ಕಡಿಮೆ ಮಾಡಿದ್ದು. ಟೀಕೆಗಳಿಂದ ಸುಮಲತಾರ ಪರ ಜನರಿಗೆ ಒಲವು ಹೆಚ್ಚಾಯ್ತು ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರ ಟೀಕೆಗಳಿಗೆ ಯಶ್ ತಿರುಗೇಟು ನೀಡಿದರು.

ಸುಮಲತಾ ಅಮ್ಮ ನಿಮ್ಮೆಲ್ಲರ ಪ್ರೀತಿ ಗಳಿಸಿದ್ದಾರೆ. ಪ್ರತಿಸ್ಪರ್ಧಿಗಳಿಗೆ ಮತ ಹಾಕಿದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ನಂಬಿಕೆ ಗಳಿಸುತ್ತಾರೆ. ಹಿರಿಯರು ಮಾರ್ಗದರ್ಶನ ಮಾಡಿ. ಅವರು ಎಲ್ಲ ಕೆಲಸವನ್ನೂ ಮಾಡಿಕೊಡುತ್ತಾರೆ. ಆದರೆ, ಎಲ್ಲ ಎಂಪಿ, ಸಚಿವರು, ಎಂಎಲ್​ಎಗಳಿಗೆ ಆಗುವ ಒಂದು ತೊಂದರೆಯೇನೆಂದರೆ ಅನೇಕ ಜನರು ತಮ್ಮ ಮನೆಯ ಮದುವೆ, ಹುಟ್ಟುಹಬ್ಬ ಮತ್ತಿತರ ಸಂಭ್ರಮದ ಕಾರ್ಯಕ್ರಮಕ್ಕೆ ಬರಲಿ ಎಂದು ಬಯಸಿ ಒತ್ತಾಯಿಸುತ್ತಾರೆ. ಹಾಗೊಮ್ಮೆ ಬರದೆ ಇದ್ದರೆ, ಅವರು ಬರಲಿಲ್ಲ ಮುಂದಿನ ಬಾರಿ ಮತ ಹಾಕಬಾರದು ಎಂಬ ತೀರ್ಮಾನಕ್ಕೆ ಬರುತ್ತಾರೆ. ದಯವಿಟ್ಟು ಹಾಗೆ ಭಾವಿಸಬೇಡಿ. ರಾಜಕಾರಣಿಗಳು ಮಾಡಲು ಬೇರೆ ಕೆಲಸಗಳು ಇವೆ. ಅದನ್ನು ಮಾಡಿಸೋಣ. ನಮ್ಮ ವೈಯಕ್ತಿಕ ಕೆಲಸಗಳನ್ನು ನಾವೇ ಮಾಡಿಕೊಳ್ಳೋಣ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top