fbpx
ಸಮಾಚಾರ

ಮಹಾತ್ಮ ಗಾಂಧಿ ಪಾಕಿಸ್ಥಾನದ ಪಿತಮಹಾ ಎಂದ ಬಿಜೆಪಿ ವಕ್ತಾರ- ಪಕ್ಷದಿಂದ ಉಚ್ಚಾಟನೆ.

ಮಹಾತ್ಮಾ ಗಾಂಧಿ ಅವರನ್ನು ಪಾಕಿಸ್ಥಾನದ ಪಿತ ಎಂದು ಕರೆದ ವಿವಾದಿತ ಸೋಶಿಯಲ್‌ ಮೀಡಿಯ ಪೋಸ್ಟ್‌ ಗಾಗಿ ಭಾರತೀಯ ಜನತಾ ಪಕ್ಷದ ವಕ್ತಾರ ಅನಿಲ್‌ ಸೌಮಿತ್ರ ಅವರನ್ನು ಪಕ್ಷದ ಸದಸ್ಯತ್ವದಿಂದಲೇ ಅಮಾನತು ಮಾಡಲಾಗಿದೆ ಎಂದು ಬಿಜೆಪಿ ಹೇಳಿದೆ.

ಮಧ್ಯಪ್ರದೇಶದ ಬಿಜೆಪಿ ವಕ್ತಾರ ಅನಿಲ್ ಸೌಮಿತ್ರ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಈ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಭಾರತವು ಸನಾತನ ದೇಶವಾಗಿದೆ. ಭಾರತದಿಂದ ಪಾಕಿಸ್ತಾನ ನಿರ್ಮಾಣವಾಗಿದೆ. ಹೀಗಾಗಿ ಮಹಾತ್ಮ ಗಾಂಧಿ ಪಾಕಿಸ್ತಾನಕ್ಕೆ ಪಿತಾಮಹರೇ ಹೊರತು ಭಾರತಕ್ಕಲ್ಲ ಎಂದು ಹೇಳಿದ್ದಾರೆ.

ತಮ್ಮ ಹೇಳಿಕೆಯ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅನಿಲ್ ಸೌಮಿತ್ರ ಅವರು, ಭಾರತದಿಂದ ಜವಾಹರಲಾಲ್ ನೆಹರು ಹಾಗೂ ಪಾಕಿಸ್ತಾನದಿಂದ ಮೊಹಮ್ಮದ್ ಅಲಿ ಜಿನ್ನಾ ಸೇರಿ ಎರಡು ರಾಷ್ಟ್ರಗಳನ್ನು ನಿರ್ಮಾಣ ಮಾಡಿದರು. ದೇಶ ವಿಭಜನೆ ಮಹಾತ್ಮ ಗಾಂಧಿ ಮುಂದೆಯೇ ಆಗಿದೆ. ಹೀಗಾಗಿ ಗಾಂಧೀಜಿ ಪಾಕಿಸ್ತಾನಕ್ಕೆ ಪಿತಾಮಹರು ಎಂದು ತಿಳಿಸಿದ್ದಾರೆ.

ವಿವಾದಾತ್ಮಕ ಹೇಳಿಕೆ ನೀಡಿದ ಅನಿಲ್ ಸೌಮಿತ್ರ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದ್ದು, ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಪರವಾಗಿ ಹೇಳಿಕೆ ನೀಡುತ್ತಿರುವ ಉಳಿದ ನಾಯಕರಿಗೂ ಈ ಬಿಸಿ ತಟ್ಟುವ ಸಾಧ್ಯತೆಗಳಿವೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top