fbpx
ಸಮಾಚಾರ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯರಿಗಾಗಿ ವಿಶೇಷ ಕ್ಯಾಬ್ ವ್ಯವಸ್ಥೆ !

ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಬಲಪಡಿಸುವ ಸಲುವಾಗಿ ಸೋಮವಾರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯರಿಗಾಗಿ ಮಹಿಳೆಯರೇ ಓಡಿಸುವ ವಿಶೇಷವಾದ ಗುಲಾಬಿ ಬಣ್ಣದ ಕ್ಯಾಬ್ ಗಳ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದ್ದು ಈ ವ್ಯವಸ್ಥೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಪ್ರಾಧಿಕಾರ ಪರಸ್ಪರ ಸಹಕಾರದಿಂದ ಜಾರಿಗೆ ಬಂದಿದೆ ಎಂದು ತಿಳಿದು ಬಂದಿದೆ.

ಮುಖ್ಯವಾಗಿ ಈ ವಿಶೇಷ ಟ್ಯಾಕ್ಸಿ ಕ್ಯಾಬ್ ಗಳನ್ನೂ ಓಡಿಸುವ ಮಹಿಳಾ ಚಾಲಕರು ಬಹುಭಾಷೆಗಳನ್ನು ನಿರರ್ಗಳವಾಗಿ ಮಾತಾಡಬಲ್ಲವರಾಗಿದ್ದು, ಸ್ಥಳೀಯ ಪ್ರದೇಶಗಳ ಕುರಿತಾಗಿ ಜ್ಞಾನವುಳ್ಳವರಾಗಿರುತ್ತಾರೆ ಮತ್ತು ಸ್ವಯಂ ರಕ್ಷಣೆ ತಂತ್ರಗಳಲ್ಲಿ ತರಬೇತಿ ಪಡೆದಿರುತ್ತಾರೆ. ಹಾಗೂ ಜಿಪಿಆರ್ಎಸ್ ಟ್ರಾಕಿಂಗ್ ಮತ್ತು ಎಸ್ಒಎಸ್ ಸ್ವಿಚ್ ಸೇರಿದಂತೆ ಅನೇಕ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡ ಈ ಪರಿಕಲ್ಪನೆಯು ಸ್ತ್ರೀ ಪ್ರಯಾಣಿಕರ ಸುರಕ್ಷಿತಗೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚು ಗಮನ ನೀಡಲಿದೆಯಂತೆ.

ಒಟ್ಟಿನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭವಾದ ಈ ಯೋಜನೆಯೂ 10 ಕಾರುಗಳೊಂದಿಗೆ ಜಾರಿಗೆ ಬಂದಿದ್ದು ಬೇಡಿಕೆ ಮತ್ತು ಪ್ರಯಾಣಿಕರ ಪ್ರತಿಕ್ರಿಯೆಯ ಆಧಾರದ ಮೇಲೆ ಕ್ರಮೇಣ ಈ ವ್ಯವಸ್ಥೆ ವಿಶಾಲಗೊಳ್ಳುತ್ತದೆ ಎನ್ನಲಾಗಿದೆ.ಇನ್ನೂ ಈ ವಿಶೇಷ ಕ್ಯಾಬ್ ನಲ್ಲಿ ಏಕವ್ಯಕ್ತಿ ಮಹಿಳಾ ಪ್ರಯಾಣಿಕರು ಮತ್ತು ಮಹಿಳೆಯರ ಗುಂಪು ಪ್ರಯಾಣಿಸಬಹುದಾಗಿದ್ದು ದಿನದ 24 ಗಂಟೆಯೂ ಈ ಸೌಲಭ್ಯ ಲಭ್ಯವಾಗಲಿದೆ. ಮತ್ತು ಈ ‘ವುಮನ್ ಓನ್ಲಿ’ ಕ್ಯಾಬ್ ವ್ಯವಸ್ಥೆಯಲ್ಲಿ ಬೆಳಗ್ಗೆ ರೂ 21.50 / ಕಿ.ಮೀ. ಮತ್ತು ರಾತ್ರಿಯಲ್ಲಿ ರೂ 23.50 / ಕಿ.ಮೀ ಬೆಲೆಯನ್ನು ನಿಗದಿಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ KSTDC ಯ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಹೇಳಿದ್ದೇನು ?

“ಈ ಪರಿಕಲ್ಪನೆಯನ್ನು ವಿಮಾನ ನಿಲ್ದಾಣದಿಂದ ಮಹಿಳಾ ಪ್ರವಾಸಿಗರಿಗೆ ಸುರಕ್ಷಿತವಾದ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಉದ್ದೇಶದಿಂದ ಅಳವಡಿಸಲಾಗಿದ್ದು , ಅದೇ ಸಮಯದಲ್ಲಿ ಮಹಿಳಾ ಚಾಲಕರು ಸ್ವಯಂ-ಉದ್ಯೋಗಿ ಮತ್ತು ಅಧಿಕಾರವನ್ನು ಪಡೆದುಕೊಳ್ಳುವ ಅವಕಾಶಗಳನ್ನು ಸೃಷ್ಟಿಸಲಾಗುತ್ತದೆ ” ಎಂದು ಹೇಳಿದ್ದಾರೆ.

ಇನ್ನೂ ಇದರ ಬಗ್ಗೆ ಮಾತನಾಡಿದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಪ್ರಾಧಿಕಾರದ ಸಿಇಓ ಹರಿ ಮರಾರ್ ‘ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆಯನ್ನು ಒದಗಿಸುವದು ನಮ್ಮ ಪ್ರಧಾನ ಆದ್ಯತೆಯಾಗಿದ್ದು, ಈ ವ್ಯವಸ್ಥೆ ಅದರ ಮುಂದಿನ ಹೆಜ್ಜೆಯಾಗಿದೆ’ ಎಂದರು ಮತ್ತು ‘ಈ ವ್ಯವಸ್ಥೆಯನ್ನು ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲು ಸಹಕಾರ ಒದಗಿಸಿದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ’ ಧನ್ಯವಾದ ಸಲ್ಲಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top