fbpx
ಸಮಾಚಾರ

TRP ದಾಹಕ್ಕೆ ಬಿದ್ದು ಕನ್ನಡಿಗರ ಗಂಭೀರ ಸಮಸ್ಯೆಯನ್ನು ಮರೆತ ಕನ್ನಡ ಮಾಧ್ಯಮಗಳು.

ಕರ್ನಾಟಕದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರ ಉದ್ಯೋಗಾವಕಾಶಕ್ಕೆ ಆದ್ಯತೆ ನೀಡಬೇಕೆಂಬ ಕುರಿತಂತೆ ಕರ್ನಾಟಕದಾದ್ಯಂತ ಕನ್ನಡಪರ ಸಂಘಟನೆಗಳು ಹೋರಾಟಕ್ಕಿಳಿದು ವರ್ಷಗಳೇ ಕಳೆದಿವೆ. ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಿಲ್ಲ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಿಗರಿಗಿಂತ ಹೊರ ರಾಜ್ಯದವರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತದೆ ಎಂದು ಉದ್ಯೋಗಾಕಾಂಕ್ಷಿಗಳು ಅನೇಕ ಭಾರಿ ಹೋರಾಟಗಳನ್ನು ನಡೆಸಿದ್ದಾರೆ.. ಇಂಥಾ ಗಂಭೀರ ಸಮಸ್ಯೆಯ ಬಗ್ಗೆ ರಾಜ್ಯದ ಸಂಸದರು ಸಂಸತ್ ನಲ್ಲಿ ಮಾತನಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇದ್ದವು. ಆದರೆ ಮೊನ್ನೆಯವರೆಗೂ ಯಾರೊಬ್ಬರೂ ಕೂಡ ಈ ಬಗ್ಗೆ ಧ್ವನಿಯೆತ್ತಿರಲಿಲ್ಲ. ಆದರೆ ಮೊನ್ನೆ ಸಂಸದ ಜಿಸಿ ಚಂದ್ರಶೇಖರ್ ಈ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ.

ಸಂಸತ್ ನಲ್ಲಿ ಮಾತನಾಡಿರುವ ಚಂದ್ರಶೇಖರ್ “ಹಿಂದೆ 2014ರ ವರೆಗೆ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ 2014ರ ನಂತರ ಬ್ಯಾಂಕಿಂಗ್ ಪರೀಕ್ಷೆಯನ್ನು ಕೇವಲ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಬರೆಯಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ.. ಇದರಿಂದಾಗಿ ಕೇವಲ ಸ್ಥಳೀಯ ಭಾಷೆಯ ಜ್ಞಾನವಿರುವ ಪ್ರತಿಭಾನ್ವಿತರು ಅವಕಾಶ ವಂಚಿತರಾಗುತ್ತಿದ್ದಾರೆ. ಇದು ಕೇವಲ ಕರ್ನಾಟಕ ಮಾತ್ರವಲ್ಲದೆ ಎಲ್ಲಾ ಪ್ರಾದೇಶಿಕ ಭಾಷೆಗಳ ರಾಜ್ಯಗಳು ಈ ಸಮಸ್ಯೆಗಿರುವುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಸಭಾಪತಿ ವೆಂಕಯ್ಯ ನಾಯ್ಡು ಅವರ ಬಳಿ ಮನವಿ ಮಾಡಿಕೊಂಡರು. ವಿಶೇಷವೆಂದರೆ ಈ ಎಲ್ಲಾ ಮಾತುಗಳನ್ನು ಕನ್ನಡದಲ್ಲೇ ಮಾತನಾಡಿ ಕನ್ನಡಿಗರ ಮೆಚ್ಚುಗೆಗೆ ಚಂದ್ರಶೇಖರ್ ಪಾತ್ರರಾಗಿದ್ದಾರೆ.

 

 

ಕನ್ನಡಿಗರ ಗಂಭೀರ ಸಮಸ್ಯೆಯೊಂದರ ಬಗ್ಗೆ ಧ್ವನಿಯೆತ್ತಿದ ಸಂಸದ ಜಿಸಿ ಚಂದ್ರಶೇಖರ್ ಅವರಿಗೆ ಇಡೀ ರಾಜ್ಯದ ವಿದ್ಯಾರ್ಥಿಗಳು ಭೇಷ್ ಎಂದಿದ್ದಾರೆ.. ತಮ್ಮ ನೋವಿನ ಪರವಾಗಿ ನಿಂತಿರುವ ನಾಯಕನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಸೂಚಿಸುತ್ತಿದ್ದಾರೆ. ಆದರೆ ರಾಜ್ಯದ ಗೌರವಾನ್ವಿತ ಮಾಧ್ಯಮಗಳು, ಸಾಹಿತಿಗಳು, ಕನ್ನಡ ಪರ ಹೋರಾಟಗಾರರು, ಪ್ರಗತಿಪರ ಚಿಂತಕರು ಇತ್ಯಾದಿ ಬುದ್ದಿ ಜೀವಿಗಳೆಲ್ಲಾ ಈ ವಿಚಾರವನ್ನು ಕೇಳಿಯೂ ಕೇಳದಂತೆ ಸುಮ್ಮನಾಗಿದ್ದಾರೆ..

ಚಂದ್ರಶೇಖರ್ ಅವರು ಸಂಸತ್ ನಲ್ಲಿ ಕನ್ನಡದಲ್ಲೇ ಮಾತನಾಡಿ IBPS ಸಮಸ್ಯೆ ಬಗೆಹರಿಸುವ ಬಗ್ಗೆ ಮನವಿ ಮಾಡಿಕೊಂಡಿದ್ದರಲ್ಲಾ, ಅದರ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಈ ಬಗ್ಗೆ ಯಾವುದೇ ಸುದ್ದಿ ಮಾದ್ಯಮವಾಗಲಿ, ಸಾಮಾಜಿಕ ಜೀವನದಲ್ಲಿ ಗುರುತಿಸಿಕೊಂಡಿರುವ ಗಣ್ಯ ವ್ಯಕ್ತಿಗಳಾಗಲಿ ಬೆಂಬಲ ಸೂಚಿಸಿ ಧ್ವನಿಗೆ ಓಗೊಟ್ಟಿಲ್ಲ.. ಮಾಧ್ಯಮಗಳು ರಾಜಕೀಯ ನಾಯಕರ, ಸಿನಿಮಾ ಹೀರೋಗಳ ಬಗ್ಗೆ ಸುದ್ದಿ ಮಾಡುವುದರಲ್ಲಿ ತಲ್ಲೀನರಾಗಿರುತ್ತಾರೆ ಆದರೆ ರಾಜ್ಯದ ಮುಖ್ಯ ಸಮಸ್ಯೆಯ ಬಗ್ಗೆ ಧ್ವನಿಯೆತ್ತಿರುವ ಸಂಸದರ ಬಗ್ಗೆ ಯಾವ ಮಾಧ್ಯಮ ಕೂಡ ತೀಕ್ಷ್ಣವಾಗಿ ವರದಿ ಮಾಡಿಲ್ಲ..

ಬ್ರೇಕಿಂಗ್ ನ್ಯೂಸ್ ದಾಹಕ್ಕೆ ಬಿದ್ದಿರುವ ಕನ್ನಡದ ಬಹುತೇಕ ಸುದ್ದಿ ವಾಹಿನಿಗಳು ಯಾವುದೇ ಸಾಮಾಜಿಕ ಪಲ್ಲಟಗಳು ಜರುಗಿದಾಗಲೂ ತಮಗೆ ಬೇಕಾದ ರೀತಿಯಲ್ಲಿ ಸುಣ್ಣ ಬಣ್ಣ ಬಳಿದು ಸತ್ಯಕ್ಕಿಂತ ಅಸತ್ಯವನ್ನೇ ಹೆಚ್ಚು ಬಿತ್ತರಿಸುವ ಕೆಲಸವನ್ನು ಮಾಡುತ್ತಿವೆ., ಸುದ್ದಿಬಾಕತನ ಹುಚ್ಚಿಗೆ ಬಿದ್ದಿರುವ ಇವರುಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮರೆತು ಎಲ್ಲವನ್ನೂ ವ್ಯವಹರಿಕವಾಗಿಯೇ ನೋಡಲು ಆರಂಭಿಸಿವೆಯಾ? ಎಂಬ ಅನುಮಾನ ರಾಜ್ಯದ ವಿದ್ಯಾರ್ಥಿಗಳಲ್ಲಿ ಮೂಡುತ್ತಿದೆ. ಏಕೆಂದರೆ ಚಾನೆಲ್ಲುಗಳಿಗೆ ಸಿನಿಮಾ ನಟ, ರಾಜಕಾರಣಿಗಳಿಗಿಂತ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮುಖ್ಯವಾಗಬೇಕಿತ್ತು, ಇಂಥಾ ಗಂಭೀರ ಸಮಸ್ಯೆಯ ಬಗ್ಗೆ ಧ್ವನಿಯೆತ್ತಿರುವ ವ್ಯಕ್ತಿ ಯಾರೇ ಆಗಲೇ ಪಕ್ಷಾತೀತವಾಗಿ ಹುರಿದುಂಬಿಸಬೇಕಿತ್ತು. ಆದರೆ ಈ ಬಗ್ಗೆ ಯಾವ ಮಾಧ್ಯಮಕ್ಕೂ ಕಿಂಚಿತ್ತೂ ಜವಾಬ್ದರಿ ಇಲ್ಲದಂತೆ ಕಾಣುತ್ತಿದೆ ಎಂದು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಲ್ಲಿ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ…

ಇನ್ನು ಪ್ರಗತಿಪರ ಚಿಂತಕರು, ಕನ್ನಡ ಸಾಹಿತಿಗಳದ್ದೂ ಇದೆ ಕಥೆ. ಯಾರೊಬ್ಬರೂ ಕೂಡ ಸಮಸ್ಯೆಯ ಬಗ್ಗೆ ಧ್ವನಿಯೆತ್ತಿದವರನ್ನು ಬೆಂಬಲಿಸಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನಡೆಯುತ್ತಿರುವ ಹೋರಾಟಕ್ಕೆ ನಮ್ಮವರೇ ತಾತ್ಸಾರದ ಮನೋಭಾವನ್ನು ಹೊಂದಿರುವುದು ವಿಷಾದನೀಯ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.. ಇದೇನೇ ಆದರೂ ಇನ್ನಾದರೂ IPBS ಸಮಸ್ಯೆಯತ್ತ ಗಮನಹರಿಸಿ ರಾಜ್ಯದ ವಿದ್ಯಾರ್ಥಿಗಳ ಪರ ಯಾರೇ ಧ್ವನಿ ಎತ್ತಿದರೂ ಅದನ್ನು ದೊಡ್ಡ ಮಟ್ಟದ ಸುದ್ದಿಯನ್ನಾಗಿ ತೋರಿಸಲಿ ಎಂಬುದೇ ಎಲ್ಲರ ಆಶಯವಾಗಿದೆ.

ಏನಿದು IBPS ವಿವಾದ?
ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನೆಲ್ ಸೆಲೆಕ್ಷನ್ ನಡೆಸಿದ ಪರೀಕ್ಷೆಯಲ್ಲಿ ಹೊರ ರಾಜ್ಯದ ಶೇ 85ರಿಂದ 100ರಷ್ಟು ಅಭ್ಯರ್ಥಿಗಳು ನೇಮಕಗೊಳ್ಳುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿ ಶೇ 20ರಷ್ಟು ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪ್ರಾದೇಶಿಕ ಹಾಗೂ ಸ್ಥಳೀಯ ಭಾಷಿಗರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕೆಂಬ ನಿಯಮವಿದೆ. ಆದರೆ ಈ ನಿಯಮ ಪಾಲನೆ ಆಗುತ್ತಿಲ್ಲ,, ಜೊತೆಗೆ ಮೊದಲು ಇದ್ದ ನಿಯಮವನ್ನು ತಿದ್ದುಪಡಿ ಮಾಡಿ ಬ್ಯಾಂಕಿಂಗ್ ಪರೀಕ್ಷೆಯನ್ನು ಕೇವಲ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಬರೆಯಬೇಕು ಎಂಬ ನಿಯಮವನ್ನು 2014ರಲ್ಲಿ ಜಾರಿಗೊಳಿಸಲಾಗಿದೆ..

ಐಬಿಪಿಎಸ್ ನಡೆಸಿದ ಪರೀಕ್ಷೆಯಲ್ಲಿ ರಾಜ್ಯದ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತಿಲ್ಲ. ಈ ಸಂಬಂಧ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳು ಪ್ರತಿಭಟಿಸುತ್ತಲೇ ಇದ್ದಾರೆ. ಆದರೆ ಎಷ್ಟೇ ಮನವಿ, ಪ್ರತಿಭಟನೆ, ಹೋರಾಟ ಮಾಡಿದರೂ ಮಾತ್ರ ಹಠ ಹಿಡಿದು ಕೂತಿರುವ ಕೇಂದ್ರ ಸರ್ಕಾರ ಇತ್ತ ಕಡೆ ತಿರುಗಿ ಕೂಡ ನೋಡಿಲ್ಲ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top