fbpx
ಸಮಾಚಾರ

“ನನಗೆ ಹಾರ, ಪೇಟಗಳನ್ನ ಹಾಕಬೇಡಿ, ದೇವರಿಗೆ ಹಾಕಿ” ಅಂದ್ರು ಕಿಚ್ಚಾ ಸುದೀಪ್- ಬಿಗ್‌ಬಾಸ್‌ ನಡೆಗೆ ವ್ಯಕ್ತವಾಯ್ತು ಮೆಚ್ಚುಗೆ

ವೇದಿಕೆ, ಸನ್ಮಾನ ಮತ್ತು ಹಾರ ತುರಾಯಿಗಳಿಗಾಗಿ ಸದಾ ಹಂಬಲಿಸುತ್ತಾ ಅದನ್ನೇ ಸಂಭ್ರಮಿಸುವವರು ಚಿತ್ರರಂಗದಲ್ಲಿ ಯಥೇಚ್ಚವಾಗಿ ಕಾಣಸಿಗುತ್ತಾರೆ. ಆದರೆ ಕಿಚ್ಚಾ ಸುದೀಪ್ ಅಂಥದ್ದನ್ನೆಲ್ಲ ನಯವಾಗಿಯೇ ತಿರಸ್ಕರಿಸುವ ಮೂಲಕ ಯುವ ನಟರಿಗೂ ಮಾದರಿಯಾಗುವಂಥಾ ನಡೆಯೊಂದನ್ನು ಪ್ರದರ್ಶಿಸಿದ್ದಾರೆ. ಇಂಥಾದ್ದೊಂದು ಸಕಾರಾತ್ಮಕ ಬೆಳವಣಿಗೆಗೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ದ ನೂತನ ಕಛೇರಿಯ ಉದ್ಘಾಟನಾ ಸಮಾರಂಭ ಸಾಕ್ಷಿಯಾಗಿದೆ!

ಸಮಾರಂಭಕ್ಕೆ ಸುದೀಪ್ ಆಗಮಿಸಿದ್ದರು. ಅವರೇ ಕಚೇರಿಯನ್ನು ಉದ್ಘಾಟಿಸಿದರು. ಇದಾದ ಸಂಘದ ಪದಾಧಿಕಾರಿಗಳ ಜೊತೆ ಮಾಧ್ಯಮದವರೊಂದಿಗೆ ಮಾತನಾಡಿದರು. ನಂತರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಕುರ್ಚಿ ಸರಿಪಡಿಸಿ ಸುದೀಪ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸುವ ಕಾರ್ಯಕ್ಕೆ ಮುಂದಾದರು. ಇದನ್ನು ಮನಗಂಡ ಸುದೀಪ್ ವಿನಮ್ರವಾಗಿಯೇ ” ದಯವಿಟ್ಟು ತಪ್ಪು ಭಾವಿಸಬೇಡಿ. ನಾನು ಹಾರ, ಶಾಲು ಹಾಕಿಸಿಕೊಳ್ಳುವುದಿಲ್ಲ. ಹಾರವನ್ನು ದೇವರಿಗೆ ಹಾಕಿ’ ಅಂತ ಘೋಶಿಸಿದರು. ಅಲ್ಲಿಗೆ ಸನ್ಮಾನ ಸಮಾರಂಭವೂ ಸಮಾಪ್ತಿಯಾಯಿತು!

 

 

ಇಂಥಾದ್ದೊಂದು ನಿಲುವು ಪ್ರಕಟಿಸುವ ಮೂಲಕ ಸುದೀಪ್ ನಿಜಕ್ಕೂ ಮಾದರಿಯಾಗಿದ್ದಾರೆ. ಅವರು ಈ ಹಿಂದೆಯೇ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಕೇಕು ಮುಂತಾದವುಗಳನ್ನು ತರದಂತೆ ಅಭಿಮಾನಿಗಳಲ್ಲಿ ಪ್ರೀತಿಯಿಂದ ಕೇಳಿಕೊಂಡು ಅದನ್ನು ಅನಾಥಾಶ್ರಮಗಳಿಗೆ ಕೊಡುವಂತೆ ಪ್ರೇರೇಪಿಸಿದ್ದರು. ಇನ್ನು ಕಟೌಟುಗಳಿಗೆ ಹಾಲು ಸುರಿದು ವ್ಯರ್ಥವಾಗಿಸೋ ಬದಲು ಅದನ್ನೂ ನಿರ್ಗತಿಕರಿಗೆ ಹಂಚುವಂತೆಯೂ ಅಭಿಮಾನಿಗಳಿಗೆ ತಿಳಿ ಹೇಳಿದ್ದರು.

ಒಂದು ದೊಡ್ಡ ಮನ್ವಂತರ ಸಾಧ್ಯವಾಗೋದು ಇಂಥಾ ಸಣ್ಣ ಸಣ್ಣ ಸಂಗತಿಗಳಿಂದಲೇ. ಸುದೀಪ್ ಅವರಂತೆ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟರು ಇಂಥಾ ನಿಲುವುಗಳ ಮೂಲಕವೇ ಸಮಾಜದಲ್ಲೊಂದಷ್ಟು ಬದಲಾವಣೆ ತರುವುದೂ ಸಾಧ್ಯವಿದೆ. ಸುದೀಪ್ ಅದಕ್ಕೆ ಶ್ರೀಕಾರ ಹಾಕಿದ್ದಾರೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top