fbpx
ಮನೋರಂಜನೆ

ಐಟಿ ಅಧಿಕಾರಿಗಳ ಅಧಿಕೃತ ಪ್ರಕಟಣೆ: ರೇಡ್​​ನಲ್ಲಿ ಜಪ್ತಿಯಾದ ಹಣ, ಚಿನ್ನ ಎಷ್ಟು ಗೊತ್ತಾ?

ಸ್ಯಾಂಡಲ್ ವುಡ್ ಸ್ಟಾರ್ ನಟರು ಹಾಗೂ ನಿರ್ಮಾಪಕರ ನಿವಾಸಗಳ ಮೇಲೆ ನಡೆದ ದಾಳಿಯ ವಿವರವನ್ನು ಆದಾಯ ತೆರಿಗೆ ಇಲಾಖೆ ಬಹಿರಂಗ ಪಡಿಸಿದೆ. ದಾಳಿಯ ಲೆಕ್ಕಾಚಾರಗಳನ್ನು ಐಟಿ ಅಧಿಕಾರಿಗಳು ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಮೂರು ದಿನದಿಂದ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು ಒಟ್ಟಾರೆ 109 ಕೋಟಿ ಅನಧಿಕೃತ ಆಸ್ತಿ ಪಾಸ್ತಿ ಪತ್ತೆ ಆಗಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

ನಟ, ನಿರ್ಮಾಪಕರ ಮೇಲೆ ಐಟಿ ದಾಳಿ ಪ್ರಕರಣದಲ್ಲಿ ಒಟ್ಟು 25.3 ಕೆ.ಜಿ ಚಿನ್ನಾಭರಣ, 2.85 ಕೋಟಿ ಹಣ ಜಪ್ತಿ ಮಾಡಲಾಗಿದೆ. ಒಟ್ಟಾರೆ ಈ ದಾಳಿಯಲ್ಲಿ ದಾಖಲೆ ಇಲ್ಲದ 109 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಆದಾಯದ ಜತೆಗೆ ಇನ್ನಷ್ಟು ಪ್ರಮುಖ ದಾಖಲೆಗಳು ಪತ್ತೆಯಾಗಿವೆ. ಅವುಗಳು ಅಘೋಷಿತ ಆಸ್ತಿ ಎಂದು ಒಪ್ಪಿಕೊಂಡಿಲ್ಲ. ಅದೂ ಸೇರಿದರೆ ಅಘೋಷಿತ ಆಸ್ತಿ ಮೌಲ್ಯ ಇನ್ನು ಬಹಳ ದೊಡ್ಡದಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿ ದಾಖಲೆಯಿಲ್ಲದ ಖರ್ಚು ವೆಚ್ಚಗಳ ಬಗ್ಗೆ ಸಾಕ್ಷಿ ಸಿಕ್ಕಿದೆ. ಅದರಲ್ಲೂ ದಾಖಲೆಯಿಲ್ಲದ ಥಿಯೇಟರ್​ ಕಲೆಕ್ಷನ್​​ ಹಾಗೂ ತೆರಿಗೆ ವಂಚನೆ ಎಸಗಿರುವುದು ಪತ್ತೆಯಾಗಿದೆ ಎಂದು ಐಟಿ ಇಲಾಖೆ ಹೇಳಿದೆ.

ನಟ ಶಿವರಾಜ್​ಕುಮಾರ್​, ಕಿಚ್ಚಾ ಸುದೀಪ್​, ಯಶ್​, ಪುನೀತ್​, ನಿರ್ಮಾಪಕರಾದ ರಾಕ್​ಲೈನ್​ ವೆಂಕಟೇಶ್​, ವಿಜಯ್​ ಕಿರಗಂದೂರ್​, ಸಿ.ಆರ್​. ಮನೋಹರ್​, ಜಯಣ್ಣ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಕರ್ನಾಟಕ ಹಾಗೂ ಗೋವಾದ ಸುಮಾರು 180 ಅಧಿಕಾರಿಗಳಿಂದ 21 ಸ್ಥಳಗಳಲ್ಲಿ ಐಟಿ ದಾಳಿ ನಡೆಸಿತ್ತು. ದಾಳಿಗೂ ಮುನ್ನ 3 ತಿಂಗಳ ಕಾಲ ಇಲಾಖೆ ತನಿಖೆ ನಡೆಸಿ ಮಾಹಿತಿ ಕಲೆ ಹಾಕಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top