fbpx
ಸಮಾಚಾರ

ಎರಡು ದಿನ ಸಂಪೂರ್ಣ ಸ್ತಬ್ಧವಾಗಲಿದೆ ಕರುನಾಡು- ಬಸ್​, ಟ್ಯಾಕ್ಸಿ, ಬ್ಯಾಂಕ್​ ಸೇವೆ ಸ್ಥಗಿತ.

ವರ್ಷದ ಆರಂಭದಲ್ಲೇ ಜನರಿಗೆ ಬಂದ್​ನ ಬಿಸಿ ಮುಟ್ಟಲಿದ್ದು ಕೇಂದ್ರ ಸರ್ಕಾರದ ವಿರುದ್ಧ ಹಲವಾರು ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನವರಿ 8 ಮತ್ತು 9ರಂದು ರಾಷ್ಟ್ರ ವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿವೆ. ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ಎಲ್‍ಪಿಎಫ್ ಕಾರ್ಮಿಕ ಸಂಘಟನೆಗಳು ಬಂದ್‍ಗೆ ಕರೆ ಕೊಟ್ಟಿದ್ದು, 12 ಬೇಡಿಕೆ ಮುಂದಿಟ್ಟು ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9 ರಂದು ಬೀದಿಗಿಳಿಯಲಿವೆ.

ದೇಶವ್ಯಾಪಿ ಮುಷ್ಕರ ನಡೆಯಲಿದ್ದು ಕೆಎಸ್​ಆರ್​ಟಿಸಿ, ಬಿಎಂಟಿಸಿ, ಟ್ಯಾಕ್ಸಿ ಸೇವೆಯಲ್ಲಿ ವ್ಯತ್ಯಯವಾಗಲಿದ್ದು, ಕೆಎಸ್​ಆರ್​ಟಿಸಿಯ 8,000, ಬಿಎಂಟಿಸಿಯ 6,300, ಈಶಾನ್ಯ ಭಾಗದ 4,000, ವಾಯುವ್ಯ ಸಾರಿಗೆ 4,300 ಬಸ್​ಗಳ ಸಂಚಾರ ಸ್ಥಗಿತಗೊಳ್ಳಲಿದೆ. ಮಂಗಳವಾರ ಬೆಳಗ್ಗೆ ಆರು ಗಂಟೆಯಿಂದ ಬುಧವಾರ ಸಂಜೆ ಐದು ಗಂಟೆಯವರೆಗೂ ಬಂದ್ ನಡೆಯಲಿದ್ದು, ಈಗಾಗಲೇ ಮೋದಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವೂ ಬೆಂಬಲ ಕೊಟ್ಟಿದೆ.

ಬಂದ್ ಕರೆ ನೀಡಲು ಕಾರಣವೇನು?
ಮೋಟಾರು ವಾಹನ ತಿದ್ದುಪಡಿ ಮಸೂದೆ -2017ರನ್ನು ಹಿಂಪಡೆಯಲು, ಸಾರಿಗೆ ಉದ್ದಿಮೆಯನ್ನ ರಕ್ಷಿಸಲು ಮತ್ತು ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸಲು ಬಂದ್‍ಗೆ ಕರೆ ಮಾಡಲಾಗಿದೆ.

ಉಳಿದಂತೆ ಆಸ್ಪತ್ರೆ, ಔಷಧಿ ಅಂಗಡಿ, ಆಂಬ್ಯುಲೆನ್ಸ್ ಸೇವೆಗೆ ಯಾವುದೇ ತೊಂದರೆ ಇಲ್ಲ. ನಮ್ಮ ಮೆಟ್ರೋ ಮತ್ತು ರೈಲು ಸೇವೆ ಎಂದಿನಂತೆ ಇರಲಿದೆ. ಎಷ್ಟು ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿವೆ ಎಂಬುದು ಸೋಮವಾರ ಖಚಿತವಾಗಲಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top