fbpx
ಸಮಾಚಾರ

ರಾಜ್ಯದ ಜನರಿಗೆ ಶಾಕ್ ನೀಡಿದ ದೋಸ್ತಿ ಸರ್ಕಾರ- ಪೆಟ್ರೋಲ್, ಡೀಸೆಲ್ ದರ ಏರಿಕೆ.

ಹೊಸ ವರ್ಷಕ್ಕೆ ಜನತೆಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು, ತೈಲ ಮಾರಾಟ ತೆರಿಗೆಯನ್ನು ಏರಿಕೆ ಮಾಡಿದ್ದು, ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ದರವನ್ನು ರಾಜ್ಯ ಸರಕಾರ ಕ್ರಮವಾಗಿ ಶೇ.32 ಮತ್ತು ಶೇ.21ಕ್ಕೆ ಹೆಚ್ಚಳ ಮಾಡಿದೆ. ಇದರಿಂದ ರಾಜ್ಯದಲ್ಲಿ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ ರೂ.1.14 ಮತ್ತು ಡೀಸೆಲ್‌ ಬೆಲೆ ರೂ.1.12 ಹೆಚ್ಚಳವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತೆರಿಗೆಯನ್ನು ಏರಿಸುತ್ತಿದ್ದೇವೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ತೆರಿಗೆ ಏರಿಸಿದ ಪರಿಣಾಮ ಕರ್ನಾಟಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70.84 ರೂ. ಆಗಿದ್ದರೆ ಡೀಸೆಲ್ ಬೆಲೆ 64.66 ರೂ.ಗೆ ಏರಿಕೆಯಾಗಲಿದೆ.

ಕಳೆದ 10 ವಾರಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ದರ ಇಳಿಕೆಯಾಗುತ್ತಿದ್ದು ಸರ್ಕಾರದ ಆದಾಯಕ್ಕೆ ಹೊಡೆತ ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೆರಿಗೆ ಏರಿಕೆ ಮಾಡಲಾಗಿದೆ ಎನ್ನಲಾಗಿದೆ. ಗ್ರಾಹಕರ ಮೇಲಿನ ಹೊರೆ ಇಳಿಸಲು ರಾಜ್ಯ ಸರಕಾರ 2018ರ ಸೆಪ್ಟೆಂಬರ್‌ 17ರಿಂದ ಜಾರಿಗೆ ಬರುವಂತೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಪ್ರತಿ ಲೀಟರ್‌ಗೆ ಸಂಗ್ರಹವಾಗುತ್ತಿದ್ದ ತೆರಿಗೆ ಮೊತ್ತವನ್ನು 2 ರೂ. ಇಳಿಕೆ ಮಾಡಿತ್ತು.

ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ದರವನ್ನು 2018ನೆ ಸಾಲಿನ ಸೆ.17ರ ಪೂರ್ವದಲ್ಲಿ ಇದ್ದಂತೆ ಶೇ.32 ಮತ್ತು ಶೇ.21ಕ್ಕೆ ಪರಿಷ್ಕರಿಸಲಾಗಿದೆ. ಅದಾಗ್ಯೂ ಇತರ ರಾಜ್ಯಗಳಿಗೆ ಹೋಲಿಸಿದಾಗ, 2019ನೆ ಸಾಲಿನ ಜನವರಿ 1ರಂದು ಇದ್ದ ಮೂಲ ಬೆಲೆಯಂತೆ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಂತಿಮ ಮಾರಾಟ ಬೆಲೆಯು ಕಡಿಮೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top