fbpx
ಸಮಾಚಾರ

ಲಕ್ನೋ ಹೋಟೆಲ್ ನಲ್ಲಿ ಐಪಿಎಸ್ ಅಧಿಕಾರಿ ಡಿ. ರೂಪಾ ಹೆಸರಿನಲ್ಲಿ ಬುಕ್ ಅಯ್ತು ರೂಮ್ !

ಉನ್ನತ ಅಧಿಕಾರಿಗಳ ಹೆಸರನ್ನು ಕೆಲವು ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿ ನಡೆಯುತ್ತಿದ್ದು , ಇದೀಗ ಇಂತಹದೇ ಒಂದು ಪ್ರಕರಣ ಬೆಳಕಿಗೆ ಬಂದಿರುವುದು ವಿಷಾದನೀಯವಾಗಿದೆ.

ಈ ಹಿಂದೆ ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಇನ್‍ಸ್ಟಾಗ್ರಾಮ್ ನಲ್ಲಿ ತಮ್ಮ ಹೆಸರಿನಲ್ಲಿ ನಕಲಿ ಖಾತೆ ತೆಗೆದು ಬಡ ಹೆಣ್ಣು ಮಕ್ಕಳಿಗಾಗಿ ಕೆಲವರು ಚಂದಾ ವಸೂಲಿ ಮಾಡುತ್ತಿದ್ದ ಬಗ್ಗೆ ಸೈಬರ್ ಕ್ರೈಂಗೆ ದೂರು ಕೊಟ್ಟಿದ್ದರು. ಆದರೆ ಇದೀಗ ಈ ರೀತಿಯದೇ ಆದ ಇನ್ನೊಂದು ವಂಚನೆ ಡಿ.ರೂಪ ಅವರ ಹೆಸರಿನಲ್ಲಿ ನಡೆದಿದ್ದು 2ನೇ ಸಲ ರೂಪಾ ಅವರು ತನ್ನ ಹೆಸರನ್ನು ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಳೆಯೊಬ್ಬರು ತಮ್ಮ ಹೆಸರು ದುರ್ಬಳಕೆ ಮಾಡಿಕೊಂಡು ಉತ್ತರ ಪ್ರದೇಶದ ಲಕ್ನೋ ಪೊಲೀಸರಿಗೆ ಕರೆ ಮಾಡಿದ್ದು, “ನಾನು ಗೃಹ ರಕ್ಷಕ ದಳದ ಐಜಿಪಿ ಡಿ.ರೂಪಾ ಮಾತನಾಡುತ್ತಿದ್ದೇನೆ. ಕೆಲಸದ ನಿಮಿತ್ತ ಲಕ್ನೋಗೆ ಬರುತ್ತಿದ್ದೇನೆ. ಡಿಸೆಂಬರ್ 29 ರಿಂದ ಜನವರಿ 3ರವರೆಗೆ ಒಳ್ಳೆಯ ಹೋಟೆಲ್‍ನಲ್ಲಿ ರೂಂ ಬುಕ್ ಮಾಡಿ” ಎಂದು ಹೇಳಿದ್ದಾರೆ. ಅವರ ಮಾತನ್ನು ನಂಬಿದ ಅಧಿಕಾರಿ, ರೂಂ ಕೂಡ ಬುಕ್ ಮಾಡಿದ್ದಾರೆ . ಆದರೆ ಈ ಬಗ್ಗೆ ಪರಿಚಯದ ಅಧಿಕಾರಿ ವಿಕಾಸ್ ಚಂದ್ರ ತ್ರಿಪಾಠಿ ರೂಪಾಗೆ ಕರೆ ಮಾಡಿ ವಿಚಾರಿಸಿದಾಗ ಈ ಕೃತ್ಯ ಬಯಲಾಗಿದೆ.

ಯಾರೋ ನಿಮ್ಮ ಹೆಸರು ಹೇಳಿಕೊಂಡು ಈ ನಂಬರ್ ನಿಂದ ಕರೆ ಮಾಡಿದ್ದರು ಎಂದು ತ್ರಿಪಾಠಿ ಅವರು ಡಿ.ರೂಪಾ ಅವರಿಗೆ ಕರೆ ಮಾಡಿ ತಿಳಿಸಿ ಜೊತೆಗೆ ಆ ವ್ಯಕ್ತಿಯ ಫೋನ್ ನಂಬರನ್ನು ನೀಡಿದ್ದಾರೆ. ರೂಪಾ ಅವರು ತಕ್ಷಣವೇ ಆ ನಂಬರ್ ಗೆ ಕರೆ ಮಾಡಿ ವಿಚಾರಿಸಿದಾಗ ಆ ಮಹಿಳೆ ಸರಿಯಾಗಿ ಮಾತನಾಡದ ಕಾರಣ ಈಗ ರೂಪಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ತಮ್ಮ ಹೆಸರನ್ನು ದುರುಪಯೋಗ ಮಾಡಿಕೊಂಡ ಮಹಿಳೆಯನ್ನು ಪತ್ತೆ ಮಾಡುವಂತೆ ಬನಶಂಕರಿ ಪೊಲೀಸ್ ಠಾಣೆಗೆ ರೂಪಾ ಅವರು ದೂರು ಕೊಟ್ಟಿದ್ದಾರೆ. ಈ ಕುರಿತು ಪೊಲೀಸರು ವಂಚನೆ ಹಾಗೂ ಅಪರಾಧ ಕೃತ್ಯಕ್ಕೆ ಯತ್ನಿಸಿದ ಆರೋಪದಡಿ ಐಪಿಸಿ 417, 420(ವಂಚನೆ) 511 (ಅಪರಾಧ ಕೃತ್ಯ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top