fbpx
ಸಮಾಚಾರ

#IBPS ಪರೀಕ್ಷೆಯಲ್ಲಿ ಕನ್ನಡಿಗರಿಗೆ ಮೋಸ – ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಲಿಖಿತ ರೂಪದ ದಾಖಲೆ ಸಲ್ಲಿಸಿದ ಸಂಸದ ಜಿಸಿ ಚಂದ್ರಶೇಖರ್

ಕರ್ನಾಟಕ ಉದ್ಯೋಗಾಕಾಂಕ್ಷಿಗಳನ್ನು ಕಾಡುತ್ತಿರುವ #IBPSMOSAದ ಬಗ್ಗೆ ದೆಹಲಿಯ ಸಂಸತ್ ನಲ್ಲಿ ಸಂಸದ ಜಿಸಿ ಚಂದ್ರಶೇಖರ್ ಧ್ವನಿಯೆತ್ತಿದ್ದಾರೆ. ಹೌದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಳೀಯ ಉದ್ಯೋಕಾಂಕ್ಷಿಗಳಿಗೆ ತೊಂದರೆಯಾಗುತ್ತಿದೆ ಹಾಗಾಗಿ ರಾಜ್ಯದ ಸಂಸದರು ಈ ಬಗ್ಗೆ ಮಾತನಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇದ್ದವು. ಇದೀಗ ಸಂಸದ ಜಿಸಿ ಚಂದ್ರಶೇಖರ್ ಈ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ.

ಸಂಸತ್ ನಲ್ಲಿ ಮಾತನಾಡಿರುವ ಚಂದ್ರಶೇಖರ್ “ಹಿಂದೆ 2014ರ ವರೆಗೆ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ 2014ರ ನಂತರ ಬ್ಯಾಂಕಿಂಗ್ ಪರೀಕ್ಷೆಯನ್ನು ಕೇವಲ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಬರೆಯಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ.. ಇದರಿಂದಾಗಿ ಕೇವಲ ಸ್ಥಳೀಯ ಭಾಷೆಯ ಜ್ಞಾನವಿರುವ ಪ್ರತಿಭಾನ್ವಿತರು ಅವಕಾಶ ವಂಚಿತರಾಗುತ್ತಿದ್ದಾರೆ. ಇದು ಕೇವಲ ಕರ್ನಾಟಕ ಮಾತ್ರವಲ್ಲದೆ ಎಲ್ಲಾ ಪ್ರಾದೇಶಿಕ ಭಾಷೆಗಳ ರಾಜ್ಯಗಳು ಈ ಸಮಸ್ಯೆಗಿರುವುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಸಭಾಪತಿ ವೆಂಕಯ್ಯ ನಾಯ್ಡು ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ . ವಿಶೇಷವೆಂದರೆ ಈ ಎಲ್ಲಾ ಮಾತುಗಳನ್ನು ಕನ್ನಡದಲ್ಲೇ ಮಾತನಾಡಿ ಚಂದ್ರಶೇಖರ್ ರವರು ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

 

#IBPSMOSA ದ ಬಗ್ಗೆ ದೆಹಲಿಯ ಸಂಸತ್ ನಲ್ಲಿ ಮಾತನಾಡಿ ವಿಶ್ರಮಿಸದ ಸಂಸದ ಜಿಸಿ ಚಂದ್ರಶೇಖರ್ ರವರು ಕಾರ್ಯಮಗ್ನರಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹಾಗಾಗಿ ಈ ಕುರಿತಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಅವರಿಗೆ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನೆಲ್ ಸೆಲೆಕ್ಷನ್ ನಡೆಸುವ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗೆಗಿನ ಲಿಖಿತ ರೂಪದ ದಾಖಲೆಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಸಂಸದ ಜಿಸಿ ಚಂದ್ರಶೇಖರ್ ರವರ ಈ ನಡೆಗೆ ಎಲ್ಲೆಡೆಯಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು ‘ಈ ಸಮಸ್ಯೆಯ ಕಡೆ ಗಮನಹರಿಸುತ್ತೇನೆ’ ಎಂದು ಸಚಿವ ಅರುಣ್ ಜೇಟ್ಲಿ ರವರು ಹೇಳಿರುವುದು ಗಮನಾರ್ಹವಾಗಿದೆ.

 

ಕೇಂದ್ರ ವಿತ್ತ ಸಚಿವ ಅವರನ್ನು ಮಾನ್ಯ ಸಂಸದ ಜಿಸಿ ಚಂದ್ರಶೇಖರ್ ರವರು ಭೇಟಿ ಮಾಡಿ #IBPSMosa ಬಗ್ಗೆ ಗಮನ ಸೆಳೆಯುವ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಲ್ ಹನುಮಂತಯ್ಯ ರವರೂ ಸಹ ಹಾಜರಿದ್ದರೂ.

 

ಅಸಲಿಗೆ ಸಮಸ್ಯೆ ಏನಂದರೆ, ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನೆಲ್ ಸೆಲೆಕ್ಷನ್ ನಡೆಸುವ ಪರೀಕ್ಷೆಯಲ್ಲಿ ಹೊರ ರಾಜ್ಯದ ಶೇ 85ರಿಂದ 100ರಷ್ಟು ಅಭ್ಯರ್ಥಿಗಳು ನೇಮಕಗೊಳ್ಳುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿ ಶೇ 20ರಷ್ಟು ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ.ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪ್ರಾದೇಶಿಕ ಹಾಗೂ ಸ್ಥಳೀಯ ಭಾಷಿಗರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕೆಂಬ ನಿಯಮವಿದ್ದರೂ ಈ ನಿಯಮ ಪಾಲನೆ ಆಗುತ್ತಿಲ್ಲ, ಜೊತೆಗೆ ಮೊದಲು ಇದ್ದ ನಿಯಮವನ್ನು ತಿದ್ದುಪಡಿ ಮಾಡಿ ಬ್ಯಾಂಕಿಂಗ್ ಪರೀಕ್ಷೆಯನ್ನು ಕೇವಲ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಬರೆಯಬೇಕು ಎಂಬ ನಿಯಮವನ್ನು 2014ರಲ್ಲಿ ಜಾರಿಗೊಳಿಸಲಾಗಿದ್ದು ಇದರಿಂದಾಗಿ ಸ್ಥಳೀಯ ಪ್ರತಿಭಾನ್ವಿತ ಅಭ್ಯರ್ಥಿಗಳೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಈ ವಿಚಾರದ ಕುರಿತು ಸಂಸದ ಜಿಸಿ ಚಂದ್ರಶೇಖರ್ ರವರು ತಮ್ಮ ಅಭಿಪ್ರಾಯವನ್ನು ಮಂಡನೆ ಮಾಡಿರುವುದು ಪ್ರಶಂಸನೀಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top