fbpx
ಸಮಾಚಾರ

#IBPSMOSAದ ಬಗ್ಗೆ ಸಂಸತ್‍ನಲ್ಲಿ ಕನ್ನಡದಲ್ಲೇ ಧ್ವನಿಯೆತ್ತಿದ ಸಂಸದ ಜಿಸಿ ಚಂದ್ರಶೇಖರ್.

ಕರ್ನಾಟಕ ಉದ್ಯೋಗಾಕಾಂಕ್ಷಿಗಳನ್ನು ಕಾಡುತ್ತಿರುವ #IBPSMOSAದ ಬಗ್ಗೆ ದೆಹಲಿಯ ಸಂಸತ್ ನಲ್ಲಿ ಸಂಸದ ಜಿಸಿ ಚಂದ್ರಶೇಖರ್ ಧ್ವನಿಯೆತ್ತಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಳೀಯ ಉದ್ಯೋಕಾಂಕ್ಷಿಗಳಿಗೆ ತೊಂದರೆಯಾಗುತ್ತಿದೆ ಹಾಗಾಗಿ ರಾಜ್ಯದ ಸಂಸದರು ಈ ಬಗ್ಗೆ ಧ್ವನಿ ಎತ್ತಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇದ್ದವು. ಇದೀಗ ಸಂಸದ ಜಿಸಿ ಚಂದ್ರಶೇಖರ್ ಈ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ.

ಇಂದು ಸಂಸತ್ ನಲ್ಲಿ ಮಾತನಾಡಿರುವ ಚಂದ್ರಶೇಖರ್ “ಹಿಂದೆ 2014ರ ವರೆಗೆ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ 2014ರ ನಂತರ ಬ್ಯಾಂಕಿಂಗ್ ಪರೀಕ್ಷೆಯನ್ನು ಕೇವಲ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಬರೆಯಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ.. ಇದರಿಂದಾಗಿ ಕೇವಲ ಸ್ಥಳೀಯ ಭಾಷೆಯ ಜ್ಞಾನವಿರುವ ಪ್ರತಿಭಾನ್ವಿತರು ಅವಕಾಶ ವಂಚಿತರಾಗುತ್ತಿದ್ದಾರೆ. ಇದು ಕೇವಲ ಕರ್ನಾಟಕ ಮಾತ್ರವಲ್ಲದೆ ಎಲ್ಲಾ ಪ್ರಾದೇಶಿಕ ಭಾಷೆಗಳ ರಾಜ್ಯಗಳು ಈ ಸಮಸ್ಯೆಗಿರುವುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಸಭಾಪತಿ ವೆಂಕಯ್ಯ ನಾಯ್ಡು ಅವರ ಬಳಿ ಮನವಿ ಮಾಡಿಕೊಂಡರು. ವಿಶೇಷವೆಂದರೆ ಈ ಎಲ್ಲಾ ಮಾತುಗಳನ್ನು ಕನ್ನಡದಲ್ಲೇ ಮಾತನಾಡಿ ಕನ್ನಡಿಗರ ಮೆಚ್ಚುಗೆಗೆ ಚಂದ್ರಶೇಖರ್ ಪಾತ್ರರಾಗಿದ್ದಾರೆ.

 

 

ಏನಿದು IBPS ವಿವಾದ?
ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನೆಲ್ ಸೆಲೆಕ್ಷನ್ ನಡೆಸಿದ ಪರೀಕ್ಷೆಯಲ್ಲಿ ಹೊರ ರಾಜ್ಯದ ಶೇ 85ರಿಂದ 100ರಷ್ಟು ಅಭ್ಯರ್ಥಿಗಳು ನೇಮಕಗೊಳ್ಳುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿ ಶೇ 20ರಷ್ಟು ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪ್ರಾದೇಶಿಕ ಹಾಗೂ ಸ್ಥಳೀಯ ಭಾಷಿಗರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕೆಂಬ ನಿಯಮವಿದೆ. ಆದರೆ ಈ ನಿಯಮ ಪಾಲನೆ ಆಗುತ್ತಿಲ್ಲ,, ಜೊತೆಗೆ ಮೊದಲು ಇದ್ದ ನಿಯಮವನ್ನು ತಿದ್ದುಪಡಿ ಮಾಡಿ ಬ್ಯಾಂಕಿಂಗ್ ಪರೀಕ್ಷೆಯನ್ನು ಕೇವಲ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಬರೆಯಬೇಕು ಎಂಬ ನಿಯಮವನ್ನು 2014ರಲ್ಲಿ ಜಾರಿಗೊಳಿಸಲಾಗಿದೆ..

ಕರ್ನಾಟಕದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರ ಉದ್ಯೋಗಾವಕಾಶಕ್ಕೆ ಆದ್ಯತೆ ನೀಡಬೇಕೆಂಬ ಕುರಿತಂತೆ ಕರ್ನಾಟಕದಾದ್ಯಂತ ಕನ್ನಡಪರ ಸಂಘಟನೆಗಳು ಹೋರಾಟಕ್ಕಿಳಿದು ವರ್ಷಗಳೇ ಕಳೆದಿವೆ.ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಿಲ್ಲ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಿಗರಿಗಿಂತ ಹೊರ ರಾಜ್ಯದವರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತದೆ ಎಂದು ವಿದ್ಯಾರ್ಥಿಗಳ ಆರೋಪವಾಗಿದೆ.

ಐಬಿಪಿಎಸ್ ನಡೆಸಿದ ಪರೀಕ್ಷೆಯಲ್ಲಿ ರಾಜ್ಯದ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತಿಲ್ಲ. ಈ ಸಂಬಂಧ ಮೂರು ದಿನಗಳಿಂದ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳು ಪ್ರತಿಭಟಿಸುತ್ತಲೇ ಇದ್ದಾರೆ. ಆದರೆ ಎಷ್ಟೇ ಮನವಿ, ಪ್ರತಿಭಟನೆ, ಹೋರಾಟ ಮಾಡಿದರೂ ಮಾತ್ರ ಹಠ ಹಿಡಿದು ಕೂತಿರುವ ಕೇಂದ್ರ ಸರ್ಕಾರ ಇತ್ತ ಕಡೆ ತಿರುಗಿ ಕೂಡ ನೋಡಿಲ್ಲ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top