fbpx
ಸಮಾಚಾರ

ದಿಡ್ಡಳ್ಳಿ ಆದಿವಾಸಿಗಳೊಂದಿಗೆ ಹೊಸ ವರ್ಷ ಆಚರಿಸಿದ ನಟ ಚೇತನ್.

ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಾ, ಬಂದ ದುಡ್ಡಿನ ಲೆಕ್ಕ ಬರೆಯುತ್ತಾ ಕೂರುವ ಹೀರೋಗಳ ನಡುವೆ ಕೆಲವೇ ಕೆಲವು ನಟರು ಅನೇಕ ಸಾಮಾಜಿಕ ಸಮಸ್ಯೆಗಳು ಮತ್ತು ಶೋಷಿತರ ನೋವಿಗೆ ಮಿಡಿಯುತ್ತಾ ಬಂದಿದ್ದಾರೆ. ಅಂಥಾ ಸಾಮಾಜಿಕ ಕಳಕಳಿ ಹೊಂದಿರೋ ಕೆಲವೇ ಕೆಲವು ನಟರಲ್ಲಿ ಆ ದಿನಗಳು ಖ್ಯಾತಿಯ ಚೇತನ್ ಕೂಡ ಒಬ್ಬರು. ಆ ದಿನಗಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಚೇತನ್ ತಮ್ಮ ಜನಪರ ಸಾಮಾಜಿಕ ಕಾಳಜಿಯಿಂದ ಸಿನಿಮಾದಾಚೆಗೂ ಚಾಲ್ತಿಯಲ್ಲಿದ್ದಾರೆ. ಜೀವಪರವಾದ ಕೆಲಸ, ಕಾರ್ಯಕ್ರಮಗಳಿಗೆ ಸದಾ ಒತ್ತಾಸೆಯಾಗಿ ನಿಲ್ಲುತ್ತಾ ಬಂದಿರುವ ಚೇತನ್ ಇತ್ತೀಚಿಗೆ ಅನೇಕ ವಿಷಯಗಳಿಗೆ ಸುದ್ದಿಯಾಗುತ್ತಿದ್ದಾರೆ.

ವರ್ಷಾಂತರಗಳಿಂದಲೂ ಅಧಿವಾಸಿಗಳ, ಹಿಂದುಳಿದವರ, ಬುಡಕಟ್ಟು ಜನರ ಪರವಾಗಿ ಹೋರಾಟ ಮಾಡಿಕೊಂಡು ಬಂದಿರುವ ಚೇತನ್ ನೆನ್ನೆ ಹೊಸವರ್ಷವನ್ನು ದಿಡ್ಡಲ್ಲಿ ಆದಿವಾಸಿಗಳೊಂದಿಗೆ ಆಚರಿಸಿದ್ದಾರೆ. ಸೋಮವಾರ ರಾತ್ರಿ ಹಾಗೂ ಮಂಗಳವಾರ ಚೇತನ್‌ ಸಂತ್ರಸ್ತರೊಂದಿಗೆ ಕಳೆದಿದ್ದಾರೆ. ಈ ಮೂಲಕ ಸಂತ್ರಸ್ತರ ನಡುವೆಯೇ ತಾವು ಕೂಡ ಒಬ್ಬರಾಗಿ ಸಂಭ್ರಮಿಸಿ ಆದಿವಾಸಿಗಳ ಮುಖದಲ್ಲಿ ಮಂದಹಾಸ ಮೂಡಿಸಿದರು.

2016ರಲ್ಲಿ ಕೊಡಗು ಜಿಲ್ಲೆ ದಿಡ್ಡಳ್ಳಿಯ ಅರಣ್ಯ ಪ್ರದೇಶದಲ್ಲಿ ವಾಸಿಸಿದ್ದ ಆದಿವಾಸಿಗಳ ತೆರವುಗೊಳಿಸಿ ಅವರ ಜೀವನವನ್ನು ಒಕ್ಕಲೆಬ್ಬಿಸಿತ್ತು. ಕಾಂಗ್ರೆಸ್ ಸರ್ಕಾರದ ಈ ಕ್ರಮದ ವಿರುದ್ಧ ಅಲ್ಲಿನ ಆಧಿವಾಸಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ಆ ಪ್ರತಿಭಟನೆಯಲ್ಲಿ ಆದಿವಾಸಿಗಳ ಕೂಗಿಗೆ ನಟ ಚೇತನ್ ಕೂಡ ದನಿಗೂಡಿಸಿ ಆದಿವಾಸಿಗಳ ಪರವಾಗಿ ನಿಂತು ಅವರಿಗೆ ನ್ಯಾಯ ಕೊಡುವಂತೆ ಹಗಲು ರಾತ್ರಿ ಎನ್ನದೇ ತೀವ್ರ ಹೋರಾಟಮಾಡಿದ್ದರು.

 

 

ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಒಟ್ಟು 528 ಮನೆಗಳನ್ನು ಕಟ್ಟಿಕೊಡಲು ಮುಂದಾಗಿದ್ದು ಸೋಮವಾರಪೇಟೆ ತಾಲ್ಲೂಕಿನ ಬಸವನಳ್ಳಿ ಮತ್ತು ಬ್ಯಾಡಗೊಟ್ಟದಲ್ಲಿ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಲೇ ಇದೆ.

ಚಿತ್ರರಂಗದಲ್ಲಿ ಸ್ಟಾರ್ ಗಳು ನಾಕಾಣೆ ಸಹಾಯ ಮಾಡಿ ನೂರು ರೂಪಾಯಿ ಪ್ರಚಾರ ಪಡೆಯುವವರೇ ಹೆಚ್ಚು. ಅಂಥವರಿಗೆಲ್ಲಾ ಜನ ಸಾವಿರ ಸಂಕಷ್ಟಗಳ ನಡುವೆಯೂ ಕಾಸು ಹೊಂದಿಸಿ ಚಿತ್ರಗಳನ್ನು ನೋಡೋದರಿಂದಲೇ ತಮಗೆ ಸ್ಟಾರ್‌ಗಿರಿ ಅಮರಿಕೊಂಡಿದೆ ಎಂಬ ಕನಿಷ್ಠ ಸೌಜನ್ಯವೂ ಮರೆತು ಹೋಗಿರುತ್ತದೆ. ಆದ್ದರಿಂದಲೇ ಜನರ ಸಮಸ್ಯೆಗಳಿಗೆ ಮಿಡಿಯುವ ಮನಸ್ಥಿತಿ ಬಹುತೇಕರಿಗೆ ಇಲ್ಲವಾಗಿದೆ. ಇಂಥಾ ವಾತಾವರಣದ ನಡುವೆ ನಟ ಚೇತನ್’ರಂತಹ ನಟರ ನಡೆ ನಿಜಕ್ಕೂ ಮೆಚ್ಚುವಂಥಾದ್ದು…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top